ನಿತ್ಯ 60ಕ್ಕೂ ಅಧಿಕ ಮಕ್ಕಳು ರೈಲ್ವೆ ಹಳಿ ಮೇಲೆ ಸಂಚರಿಸಿ ಶಾಲೆ ಸೇರುತ್ತಿದ್ದು, ಈ ಅಪಾಯದ ಬಗ್ಗೆ ಅರಿವಿದ್ದರೂ ಅಲ್ಲಿನವರಿಗೆ ಪರ್ಯಾಯ ದಾರಿ ಇಲ್ಲ. `ಅನಾಹುತ ತಪ್ಪಿಸಲು ಕಿರು ಸೇತುವೆ ಮಾಡಿಕೊಡಿ’ ಎಂದು ಆ ಊರಿನ ಜನ ಅಳಲು ತೋಡಿಕೊಂಡರೂ ಯಾರೂ ಅದಕ್ಕೆ ಸ್ಪಂದಿಸಿಲ್ಲ.
ಕೊoಕಣ ರೈಲ್ವೆ ಬರುವ ಮುನ್ನ ಅಂಕೋಲಾದ ಹಟ್ಟಿಕೇರಿ ಬಳಿಯ ಅರೆಗದ್ದೆ – ತೆಂಗಿನ ಮಡಗಿ ಭಾಗದಲ್ಲಿ ಸಂಕದ ವ್ಯವಸ್ಥೆಯಿತ್ತು. ಆ ಸಂಕ ದಾಡಿ ಜನ ಊರು ಸೇರುತ್ತಿದ್ದರು. ಕೊಂಕಣ ರೈಲ್ವೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಾಗ ಆ ಸಂಕವೂ ಮುರಿದು ಬಿದ್ದಿತು. ಸಂಕವನ್ನು ಬಲಿಪಡೆದ ಕೊಂಕಣ ರೈಲ್ವೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿಲ್ಲ. ಹೀಗಾಗಿ ಆಗಿನಿಂದ ಈಗಿನವರೆಗೂ ಊರಿನವರು ಸಮಸ್ಯೆ ಅನುಭವಿಸುವುದು ತಪ್ಪಲಿಲ್ಲ.
ಅರೆಗದ್ದೆ – ತೆಂಗಿನ ಮಡಗಿ ಭಾಗಕ್ಕೆ ಸಂಚರಿಸಲು ಯೋಗ್ಯ ರಸ್ತೆ ಇಲ್ಲ. ಹೀಗಾಗಿ ಈ ಊರಿನ ಜನ ಸಹ ತಮ್ಮ ಬೈಕುಗಳನ್ನು ರೈಲ್ವೆ ಹಳಿ ಪಕ್ಕ ನಿಲ್ಲಿಸಿ ನಡೆದು ಹೋಗುತ್ತಾರೆ. ಜೊತೆಗೆ ಮಕ್ಕಳು ಶಾಲೆಗೆ ಬರಬೇಕು ಎಂದರೆ ಸದ್ಯ ರೈಲ್ವೆ ಹಳಿ ಮೇಲಿನ ನಡಿಗೆ ಅನಿವಾರ್ಯ. ಅದಕ್ಕಾಗಿ ಮಕ್ಕಳ ಜೊತೆ ಪಾಲಕರು ಶಾಲೆಯವರೆಗೆ ಬರುತ್ತಿದ್ದು, ಶಾಲೆ ಬಿಟ್ಟ ನಂತರವೂ ಇದೇ ಮಾರ್ಗವಾಗಿ ಮಕ್ಕಳನ್ನು ಮನೆಗೆ ಒಯ್ಯುವ ಕೆಲಸ ಮಾಡುತ್ತಾರೆ. ಈ ಊರಿನಲ್ಲಿ 90ಕ್ಕೂ ಅಧಿಕ ಮನೆಗಳಿದ್ದು, ಅಲ್ಲಿನವರ ಸಮಸ್ಯೆಯನ್ನು ಆಲಿಸಿದವರಿಲ್ಲ.
ರೈಲ್ವೆ ಸೇತುವೆಯ ಕೆಳಗೆ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿಯೂ ಮಕ್ಕಳು ಅಪಾಯಕಾರಿ ಹಳ್ಳ ದಾಟಿ ಶಾಲೆಗೆ ಹೋಗಬೇಕು. ರೇಲ್ವೆ ಹಳಿ ದಾಡಿದ ಮಕ್ಕಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿಯೂ ಶಾಲೆ ಸೇರಬಹುದಾಗಿದ್ದು, ಆ ಹೆದ್ದಾರಿ ಇನ್ನಷ್ಟು ಅಪಾಯಕಾರಿ. ಜೊತೆಗೆ ಶಾಲೆ ಸೇರುವ ಮಕ್ಕಳಿಗೆ 4ಕಿಮೀ ಸುತ್ತುವರೆದು ನಡೆಯುವುದು ಅನಿವಾರ್ಯ. 4ಕಿಮೀ ಸುತ್ತುವರೆದಿರುವ ಅಪಾಯಕಾರಿಯಾದ ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಕ್ಕಳನ್ನು ಕಳುಹಿಸುವ ಬದಲು ರೈಲ್ವೆ ಹಳಿಗಳ ಮೂಲಕವೇ ಶಾಲೆಗೆ ಹೋಗಿಬರುವುದು ಸಲೀಸು.
`ನಮಗೆ ಹಳ್ಳ ಹಾಗೂ ರೇಲ್ವೆ ಹಳಿ ದಾಟುವ ನಡೆಯಿಂದ ಮುಕ್ತವಾಗಲು ಕಿರು ಸಂಕ ನಿರ್ಮಿಸಿ ಕೊಡಿ’ ಎಂದು ಹತ್ತಾರು ಸಲ ಇಲ್ಲಿನ ಜನ ರೇಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ರೇಲ್ವೆ ಇಲಾಖೆಯಿಂದ ಯಾವ ಕ್ರಮವೂ ಆಗಿಲ್ಲ.