ಸಾವಿರಾರು ಜನರ ಜೀವ ಕಾಪಾಡಿದ ಡಾ ಪಿಕಳೆ ಪರಿವಾರದ ವೈದ್ಯಕೀಯ ಸಿಬ್ಬಂದಿಯೊಬ್ಬರು ಅವಮಾನ ಸಹಿಸಲಾಗದೇ ಸಾವನಪ್ಪಿದ್ದಾರೆ. ಅಚಾತುರ್ಯದಿಂದ ಅವಧಿ ಮೀರಿದ ಔಷಧಿ ನಡೆದ ತಪ್ಪಿಗೆ ಕೈ ಮುಗಿದು ಕ್ಷಮೆ ಕೋರಿದರೂ ಕ್ಷಮಿಸದವರ ಕಾಟಕ್ಕೆ ಕಾರವಾರದ ಪಿಕಳೆ ನರ್ಸಿಂಗ್ ಹೋಂ ಸಿಬ್ಬಂದಿ ರಾಜೀವ ಪಿಕಳೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೋಗಿಗಳ ಪಾಲಿನ ಆಪತ್ಪಾಂದವರಾಗಿರುವ ಕಾರವಾರದ ಡಾ ಪಿಕಳೆ ಪರಿವಾರದ ವಿರುದ್ಧ ಕೆಲ ದಿನದ ಹಿಂದೆ ವಿಡಿಯೋ ಒಂದು ವೈರಲ್ ಆಗಿತ್ತು. ಪಿಕಳೆ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ನೀಡಿದ ಬಗ್ಗೆ ರೋಗಿ ಸಂಬoಧಿಕರೊಬ್ಬರು ಪ್ರಶ್ನಿಸಿದ್ದು, ಆ ವೇಳೆ ಆಸ್ಪತ್ರೆ ಸಿಬ್ಬಂದಿಯನ್ನು ನಿಂದಿಸುವ ವಿಡಿಯೋವನ್ನು ವೈರಲ್ ಮಾಡಿದ್ದರು. ತಮ್ಮಿಂದ ಆದ ತಪ್ಪಿಗೆ ಆಸ್ಪತ್ರೆ ಸಿಬ್ಬಂದಿ ವಿಷಾಧವ್ಯಕ್ತಪಡಿಸಿ, ಬದಲಿ ಔಷಧಿಯನ್ನು ಸಹ ನೀಡಿದ್ದರು. ಆದರೆ, ಆಸ್ಪತ್ರೆ ವಿರುದ್ಧ ವಿಡಿಯೋ ಹರಿಬಿಟ್ಟವರು ಸುಮ್ಮನಿರಲಿಲ್ಲ. ಸಾಕಷ್ಟು ಪ್ರಮಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದ ಕಾರಣ ರಾಜೀವ ಪಿಕಳೆ ಅವರು ಅವಮಾನ ಅನುಭವಿಸಿದ್ದರು.
ಬಡವರಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟಿರುವ ಡಾ ಪಿಕಳೆ ಪರಿವಾರದ ಬಗ್ಗೆ ಅನೇಕರು ಅನುಕಂಪವ್ಯಕ್ತಪಡಿಸಿದ್ದರು. ಪ್ರತಿಷ್ಠಿತ ವೈದ್ಯ ಕುಟುಂಬದ ವಿರುದ್ಧ ಅಪಪ್ರಚಾರ ಮಾಡದಂತೆ ಮನವಿ ಮಾಡಿದ್ದರು. `ಹಗಲು-ರಾತ್ರಿ ಎನ್ನದೇ ವೈದ್ಯಕೀಯ ಸೇವೆಯಲ್ಲಿರುವವರನ್ನು ಗೌರವಿಸೋಣ’ ಎಂಬ ಸಂದೇಶ ನೀಡಿದರೂ ಅನೇಕರಿಗೆ ಅದು ಅರ್ದವಾಗಲಿಲ್ಲ. ವೈರಲ್ ಆದ ವಿಡಿಯೋದಿಂದ ನಿತ್ಯವೂ ಹಿಂಸೆ ಅನುಭವಿಸುತ್ತಿದ್ದ ರಾಜೀವ ಪಿಕಳೆ ಅವರು ಶುಕ್ರವಾರ ದುಡುಕು ನಿರ್ಧಾರಕ್ಕೆ ಮುಂದಾದರು. ಡಬಲ್ ಬ್ಯಾರಲ್ ಗನ್’ನಿಂದ ತಮಗೆ ತಾವೇ ಗುಂಡು ಹಾರಿಸಿಕೊಂಡು ಅವರು ಶವವಾದರು.
ಇದನ್ನೂ ಓದಿ: ಪಿಕಳೆ ಪರಿವಾವರದ ಹಿನ್ನಲೆ ಏನು? ಆ ದಿನ ನಡೆದಿದ್ದೇನು?
ಅಂಕೋಲಾ ತಾಲೂಕಿನ ಅವರ್ಸಾದಲ್ಲಿರುವ ಮನೆಯಲ್ಲಿ ರಾಜೀವ ಪಿಕಳೆ ಅವರು ಆತ್ಮಹತ್ಯೆಗೆ ಶರಣಾದರು. ಸದ್ಯ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದಾರೆ. ವಿಚಾರಣೆ ಮುಂದುವರೆದಿದೆ.