ಹೊನ್ನಾವರದ ವೈದ್ಯೆ ರಮ್ಯ ನಾಯ್ಕ ಅವರನ್ನು ಕಿರಣ ನಾಯ್ಕ ಅವರು ಅಪಹರಿಸಿ ಮದುವೆ ಆಗಿದ್ದಾರೆ. ಈ ವಿವಾಹ ನೋಂದಣಿ ರದ್ಧುಪಡಿಸುವಂತೆ ರಮ್ಯ ನಾಯ್ಕ ಅವರು ಹೋರಾಟ ಶುರು ಮಾಡಿದ್ದಾರೆ.
Advertisement. Scroll to continue reading.
ಹೊನ್ನಾವರ ಮಾಗೋಡು ಬಜ್ಜಿಕೇರಿಯಲ್ಲಿ ಕಿರಣ ಮಂಜುನಾಥ ನಾಯ್ಕ ಅವರು ವಾಸವಾಗಿದ್ದಾರೆ. 2020ರಲ್ಲಿ ಅದೇ ಊರಿನ ರಮ್ಯ ಶಾಂತರಾಮ ನಾಯ್ಕ ಅವರ ಸ್ನೇಹ ಬೆಳೆಸಿದ ಕಿರಣ ನಾಯ್ಕ ಪ್ರೀತಿಯ ಪ್ರಸ್ತಾಪ ಮಾಡಿದ್ದಾರೆ. ಪ್ರೀತಿ ಒಪ್ಪದ ರಮ್ಯಾ ನಾಯ್ಕ ಸ್ನೇಹಕ್ಕೆ ಸಮ್ಮತಿ ನೀಡಿದ್ದು, ಅದಾದ ನಂತರವೂ ಕಿರಣ ನಾಯ್ಕ ಹಾಗೂ ರಮ್ಯ ನಾಯ್ಕ ಅವರು ಅನೇಕ ಕಡೆ ಒಟ್ಟಿಗೆ ಓಡಾಟ ನಡೆಸಿದ್ದಾರೆ.
2024ರ ಅವಧಿಯಲ್ಲಿ ಕಿರಣ ನಾಯ್ಕ ರಮ್ಯಾ ನಾಯ್ಕ ಅವರ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿದ್ದಾರೆ. `ಮದುವೆ ಆಗದೇ ಇದ್ದರೆ ಫೋಟೋ ವೈರಲ್ ಮಾಡುವೆ’ ಎಂದು ಬೆದರಿಸಿದ್ದಾರೆ. ರಮ್ಯ ನಾಯ್ಕ ಅವರನ್ನು ಹೆದರಿಸಿದ ಕಿರಣ ನಾಯ್ಕ ಅವರನ್ನು ಕುಂದಾಪುರಕ್ಕೆ ಕರೆದೊಯ್ದು ಫೋಟೋ ಶೂಟ್ ಮಾಡಿಸಿದ್ದಾರೆ. ಅಲ್ಲಿನ ಸ್ಟೂಡಿಯೋ ಒಂದರಲ್ಲಿ ಕರಿಮಣಿ ಕಟ್ಟಿ ಮದುವೆಯ ಫೋಟೋ ತೆಗೆಸಿದ್ದಾರೆ.
2025ರ ಸೆಪ್ಟೆಂಬರ್ 25ರಂದು ರಮ್ಯಾ ನಾಯ್ಕ ಅವರು ಮಂಗಳೂರಿನಿAದ ಬಸ್ಸಿನಲ್ಲಿ ಬರುವಾಗ ಅವರಿಗೆ ಫೋನ್ ಮಾಡಿದ ಕಿರಣ ನಾಯ್ಕ ಭಟ್ಕಳದಲ್ಲಿಯೇ ಇಳಿಯುವಂತೆ ಸೂಚಿಸಿದ್ದಾರೆ. ಭಟ್ಕಳಕ್ಕೆ ಕಾರು ತೆಗೆದುಕೊಂಡು ಹೋಗಿದ್ದ ಕಿರಣ ನಾಯ್ಕ ಅದರಲ್ಲಿ ರಮ್ಯಾ ನಾಯ್ಕ ಅವರನ್ನು ಇಡಗುಂಜಿ ಕಡೆ ಕರೆ ತಂದಿದ್ದಾರೆ. ಮುಂದೆ ಮಾಗೋಡು ಕಡೆ ಹೋಗುವ ಬದಲು ಹೊನ್ನಾವರದ ಕಡೆ ಕಾರು ಓಡಿಸಿದ್ದಾರೆ. ಅಲ್ಲಿದ್ದ ಕಿರಣ ನಾಯ್ಕ ಅವರ ಸ್ನೇಹಿತ ಮನೋಜ ಮಾದೇವ ನಾಯಕ ವಿವಿಧ ಕಾಗದ ಪತ್ರಗಳ ಮೇಲೆ ರಮ್ಯಾ ನಾಯ್ಕ ಅವರ ಸಹಿ ಮಾಡಿಸಿದ್ದಾರೆ. ಸಹಿ ಮಾಡಲು ಒಪ್ಪದೇ ಇದ್ದಾಗ ಕೆನ್ನೆಗೆ ಬಾರಿಸಿದ್ದಾರೆ.
ಅದಾದ ನಂತರ ರಮ್ಯಾ ನಾಯ್ಕ ಅವರ ಮೊಬೈಲಿಗೆ ಓಟಿಪಿ ಒಂದು ಬಂದಿದ್ದು, ಮೊಬೈಲ್ ಕಸಿದ ಮನೋಜ ನಾಯ್ಕ ಮತ್ತೊಬ್ಬರಿಗೆ ಫೋನ್ ಮಾಡಿ ಆ ಓಟಿಪಿಯನ್ನು ಓದಿ ಹೇಳಿದ್ದಾರೆ. ಸ್ಟೂಡಿಯೋದಲ್ಲಿ ತೆಗೆದ ಮದುವೆ ಆದ ಫೋಟೋ, ಕಾಗದಪತ್ರಗಳ ಮೇಲೆ ಮಾಡಿದ ಸಹಿ ಹಾಗೂ ಓಟಿಪಿ ಹೇಳಿದ ತಕ್ಷಣ ವಿವಾಹ ನೋಂದಣಿ ಕಚೇರಿ ಮೂಲಕ ರಮ್ಯಾ ನಾಯ್ಕ ಹಾಗೂ ಕಿರಣ ನಾಯ್ಕ ಅವರ ವಿವಾಹ ನೋಂದಣಿ ಆಗಿದೆ.
ವಿವಾಹ ನೋಂದಣಿ ಪ್ರತಿಯನ್ನು ಕಿರಣ ನಾಯ್ಕ ಅವರು ರಮ್ಯಾ ನಾಯ್ಕ ಅವರ ತಂದೆ ಶಾಂತರಾಮ ನಾಯ್ಕ ಅವರಿಗೆ ವಾಟ್ಸಪ್ ಮಾಡಿದ್ದಾರೆ. ರಮ್ಯಾ ನಾಯ್ಕ ಅವರು ಈ ನಡುವೆ ಮಂಕಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದು, ಅದಕ್ಕೂ ಕಿರಣ ನಾಯ್ಕ ಅಡ್ಡಿಪಡಿಸಿದ್ದಾರೆ. ಅಲ್ಲಿನ ವೈದ್ಯರ ಮೇಲೆ ಅನುಮಾನವ್ಯಕ್ತಪಡಿಸಿದ ಕಿರಣ ನಾಯ್ಕ ಅವರು ರಮ್ಯಾ ನಾಯ್ಕ ಅವರಿಗೆ ಹೊನ್ನಾವರದಲ್ಲಿಯೇ ಕರ್ತವ್ಯ ನಿಭಾಯಿಸುವಂತೆ ತಾಕೀತು ಮಾಡಿದ್ದಾರೆ.
ಅಪಹರಿಸಿ ವಿವಾಹ ಆಗಿದಲ್ಲದೇ, ಮೋಸದಿಂದ ವಿವಾಹ ನೋಂದಣಿ ಮಾಡಿಸಿದ ಕಿರಣ ನಾಯ್ಕ ಹಾಗೂ ಅವರ ಸ್ನೇಹಿತ ಮನೋಜ ನಾಯ್ಕ ವಿರುದ್ಧ ರಮ್ಯಾ ನಾಯ್ಕ ಅವರು ಸಿಡಿದೆದ್ದಿದ್ದಾರೆ. ಕಿರಣ ನಾಯ್ಕ ಅವರು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ ಬಗ್ಗೆ ಅವರು ದೂರಿದ್ದಾರೆ.