ದಾಂಡೇಲಿ ಸುಭಾಷ ನಗರದ ಹಾಲಿನ ಅಂಗಡಿ ಎದುರು ನಿಂತಿದ್ದ ನಾಗರಾಜ ಬಾದರದಿನ್ನಿ ಅವರಿಗೆ ಮಹಿಳೆಯರಿಬ್ಬರು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾಗರಾಜ ಬಾದರದಿನ್ನಿ ಅವರ ಮರ್ಮಾಂಗಕ್ಕೆ ಅವರಿಬ್ಬರು ಹೊಡೆದಿದ್ದು, ಈ ವೇಳೆ ನಾಗರಾಜ ಬಾದರದಿನ್ನಿ ಅವರು ನರಕ ಯಾಥನೆ ಅನುಭವಿಸಿದ್ದಾರೆ.
ದಾಂಡೇಲಿಯ ಜಾಂಬೇಚಾಳ ಡಿಎಫ್‌ಎ ಗ್ರೌಂಡ್ ಹತ್ತಿರ ನಾಗರಾಜ ಹೊನ್ನಪ್ಪ ಬಾದರದಿನ್ನಿ ಅವರು ವಾಸವಾಗಿದ್ದಾರೆ. 38 ವರ್ಷದ ಅವರ ಮೇಲೆ ಗಾಂಧೀನಗರದ ಆಶ್ರಯ ಕಾಲೋನಿಯ ಬಸವ ದೇಗುಲದ ಬಳಿ ವಾಸಿಸುವ ಐರಿನ್ ಪ್ರಾನ್ಸಿಸ್ ಡಿಸೋಜಾ ಹಾಗೂ ಎಲಿಜಾ ಮಂಡಿಸ್ ಸೇರಿ ಆಕ್ರಮಣ ಮಾಡಿದ್ದಾರೆ. ಅವರಿಬ್ಬರು ಸೇರಿ ನಾಗರಾಜ ಬಾದರದಿನ್ನಿ ಅವರಿಗೆ ಚಪ್ಪಲಿಯಿಂದ ಹೊಡೆದು ಥಳಿಸಿದ್ದಾರೆ. ಅದಕ್ಕೂ ಮುನ್ನ `ನಿನ್ನ ಜೀವನವನ್ನು ಹಾಳು ಮಾಡುತ್ತೇವೆ’ ಎಂದು ಹೇಳಿ ಮರ್ಮಾಂಗಕ್ಕೆ ಒದ್ದಿದ್ದಾರೆ.
ಫೆಬ್ರವರಿ 27ರ ಸಂಜೆ 7.30ರ ಆಸುಪಾಸಿನಲ್ಲಿ ಈ ಹೊಡೆದಾಟ ನಡೆದಿದೆ. `ಕೆಂಪು ಸ್ಕೂಟಿಯಲ್ಲಿ ಆಗಮಿಸಿದ ಅಮ್ಮ-ಮಗಳು ಏಕಾಏಕಿ ತಮ್ಮ ಮೇಲೆ ಆಕ್ರಮಣ ಮಾಡಿದ್ದಾರೆ. ಅವರ ವಿರುದ್ಧ ಕ್ರಮವಾಗಬೇಕು’ ಎಂದು ನಾಗರಾಜ ಬಾದರದಿನ್ನಿ ಅವರು ಅಳಲು ತೋಡಿಕೊಂಡಿದ್ದಾರೆ. `ನಿನ್ನ ಹೆಂಡತಿ ಬ್ಲಾಕ್ ಬ್ಯೂಟಿ, ಈಗಲೂ ವಕೀಲ ವೃತ್ತಿ ಮಾಡತ್ತಾಳ? ಎಂದು ಆ ಮಹಿಳೆಯರಿಬ್ಬರು ಪ್ರಶ್ನಿಸಿದ್ದು, ಅದಾದ ನಂತರ ದಾಳಿ ಮಾಡಿದ್ದಾರೆ’ ಎಂದವರು ಪೊಲೀಸರ ಬಳಿ ವಿವರಿಸಿದ್ದಾರೆ. ಚಪ್ಪಲಿಯಿಂದ ಹೊಡೆದಿರುವ ಬಗ್ಗೆಯೂ ಅವರು ವಿವರಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಐರಿನ್ ಪ್ರಾನ್ಸಿಸ್ ಡಿಸೋಜಾ ಅವರು ಸಹ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆ ದಿನ ರಾತ್ರಿ ನಡೆದ ಘಟನಾವಳಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸುಭಾಷನಗರದ ಚಿಕನ್ ಅಂಗಡಿ ಎದುರು ನಾಗರಾಜ ಬಾದರದಿನ್ನಿ ಅವರು ತಮ್ಮನ್ನು ಅಡ್ಡಗಟ್ಟಿ ಬೈದ ಬಗ್ಗೆ ಐರಿನ್ ಪ್ರಾನ್ಸಿಸ್ ಡಿಸೋಜಾ ಅವರು ದೂರಿದ್ದಾರೆ. ಎರಡು ಕಡೆಯವರ ಮಾತು ಆಲಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.