ಶಿರಸಿಯ ಪಡ್ತಿಗಲ್ಲಿಯಲ್ಲಿರುವ ಪಿಜಿಯಲ್ಲಿದ್ದ ಕಾಲೇಜು ಕನ್ಯೆಯೊಬ್ಬರು ಕಾಣೆಯಾಗಿದ್ದಾರೆ. ಆ ವಿದ್ಯಾರ್ಥಿನಿಗಾಗಿ ಪಾಲಕರ ಜೊತೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಹಾವೇರಿಯ ಹಾನಗಲ್ಲಿನ ಶೇಷಗಿರಿ ಬಳಿಯ ಅಮೂಲ್ಯಾ ಕಾಳಿ (18) ಅವರು ಶಿರಸಿಯಲ್ಲಿ ವಾಸವಾಗಿದ್ದರು. ಬಿಳೂರು ಕಾಲೇಜಿನಲ್ಲಿ ಅವರು ದ್ವಿತೀಯ ಪಿಯುಸಿ ಓದುತ್ತಿದ್ದರು. ಶಾಂತ ಸ್ವಭಾವದವರಗಿದ್ದ ಅವರು ಫೆಬ್ರವರಿ 8ರಂದು ಬೆಳಗ್ಗೆ ಬ್ಯಾಗ್ ಹಾಕಿಕೊಂಡು ಪಿಜಿಯಿಂದ ಹೊರಟಿದ್ದು, ಮರಳಿ ಬಂದಿಲ್ಲ.
ಪಿಜಿಯ ವಾರ್ಡನ್ ಅಮೂಲ್ಯಾ ಅವರ ಕುಟುಂಬದವರಿಗೆ ಫೋನ್ ಮಾಡಿದಾಗ ವಿದ್ಯಾರ್ಥಿನಿ ಕಾಣೆಯಾಗಿರುವುದು ಗೊತ್ತಾಗಿದೆ. ಕಾಲೇಜಿನಲ್ಲಿಯೂ ಅಮೂಲ್ಯಾ ಅವರು ಕಾಣದಿರುವಾಗ ಎಲ್ಲರ ಆತಂಕ ಹೆಚ್ಚಾಗಿದೆ. ಶಿರಸಿ ನಗರ ಬಸ್ ನಿಲ್ದಾಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಹೀಗಾಗಿ ಅಮೂಲ್ಯಾ ಅವರ ತಾಯಿ ಜಯಶ್ರೀ ಶಂಕ್ರಪ್ಪ ಕಾಳಿ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ವಿದ್ಯಾರ್ಥಿನಿಯ ಮೊಬೈಲ್ ಕರೆ ವಿವರ, ಸ್ನೇಹಿತರ ಸಂಪರ್ಕದ ಆಧಾರದಲ್ಲಿ ಹುಡುಕಾಟ ನಡೆಸಿದ್ದಾರೆ.