ಶಿರಸಿ-ಸಿದ್ದಾಪುರ ಭಾಗದ ಅಡಿಕೆ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದು, ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸಿ ಆ ಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಮುಖರು ಶಾಸಕ ಭೀಮಣ್ಣ ನಾಯ್ಕ ಅವರ ಭೇಟಿ ಮಾಡಿದ್ದಾರೆ. ಅಡಿಕೆಗೆ ಆವರಿಸಿದ ಭೀಕರ ರೋಗಬಾಧೆ, ಇಳುವರಿ ಕುಸಿತದ ಜೊತೆ ಕಾಡು ಪ್ರಾಣಿಗಳ ಹಾವಳಿಯಿಂದ ಆಗುವ ಸಮಸ್ಯೆಗಳ ಬಗ್ಗೆಯೂ ರೈತ ಮುಖಂಡರು ಮಾತನಾಡಿದ್ದಾರೆ.
`ಸಿದ್ದಾಪುರ ತಾಲೂಕಿನಲ್ಲಿ ಶೇ 80ಕ್ಕೂ ಅಧಿಕ ಕುಟುಂಬಗಳು ಅಡಿಕೆ ಬೆಳೆ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಎರಡು ವರ್ಷಗಳಿಂದ ಅಡಿಕೆ ಮರಗಳಿಗೆ ಎಲೆಚುಕ್ಕಿ ರೋಗ ಮಾರಕವಾಗಿ ಪರಿಣಮಿಸಿದ್ದು, ಅದರೊಂದಿಗೆ ಇನ್ನಿತರ ರೋಗಗಳ ಹಾವಳಿಯಿಂದಾಗಿ ಸಾವಿರಾರು ಎಕರೆ ತೋಟಗಳು ನಾಶವಾಗುವ ಹಂತಕ್ಕೆ ತಲುಪಿವೆ. ಕಳೆದ ವರ್ಷ ಇಳುವರಿಯಲ್ಲಿ ಶೇ 50 ರಷ್ಟು ಕುಸಿತ ಕಂಡಿದ್ದು, ಈ ಬಾರಿ ಶೇ 30 ಕ್ಕೆ ಸೀಮಿತವಾಗುವ ಭೀತಿ ಎದುರಾಗಿದೆ’ ಎಂದು ಆ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ.
`ಅತಿಯಾದ ಮಳೆಯಿಂದ ಉಂಟಾದ ಕೊಳೆ ರೋಗ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಕೃಷಿಗಾಗಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿAದ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 114 ಕೋಟಿ ರೂ ಬೆಳೆ ಸಾಲ ಹಾಗೂ 98 ಕೋಟಿ ರೂ ಮಧ್ಯಮಾವಧಿ ಸಾಲದ ಹೊರೆಯಲ್ಲಿದ್ದಾರೆ. ಇಳುವರಿ ಇಲ್ಲದೆ ಸಾಲ ಮರುಪಾವತಿ ಮಾಡುವುದು ಅಸಾಧ್ಯವಾಗಿದೆ’ ಎಂದು ತಮ್ಮ ಕಷ್ಟ ವಿವರಿಸಿದ್ದಾರೆ.
`ಕಳೆದ ಸಾಲಿನ ಬೆಳೆ ಸಾಲವನ್ನು ಬಡ್ಡಿ ರಿಯಾಯಿತಿಯೊಂದಿಗೆ ಮುಂದಿನ ಸಾಲಿಗೆ ರೈತರಿಗೆ ನವೀಕರಿಸಬೇಕು. ಸೊಸೈಟಿಗಳಿಗೆ ನೀಡಲಾಗುವ ಬಡ್ಡಿ ಹಣ ಪಾವತಿಸಬೇಕು’ ಎಂದು ಮನವಿ ಮಾಡಿದ್ದಾರೆ. `ಮಧ್ಯಮಾವಧಿ ಸಾಲದ ಕಂತು ಪಾವತಿಗೆ ಕನಿಷ್ಠ ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ನೀಡಬೇಕು. ಜೊತೆಗೆ 2024-25ನೇ ಸಾಲಿನ ಬೆಳೆ ವಿಮೆ ಪರಿಹಾರ ಮೊತ್ತವನ್ನು ಶೀಘ್ರವಾಗಿ ವಿತರಿಸಲು ಸರ್ಕಾರಕ್ಕೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದ್ದಾರೆ.
ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೇಸರ, ಸಹಕಾರಿಗಳಾದ ಎಂ ಎಲ್ ಭಟ್ಟ, ಸಿ ಎನ್ ಹೆಗಡೆ, ರಾಜು ಹೆಗಡೆ, ಎಂ ಎನ್ ಹೆಗಡೆ, ಎಂ ಜಿ.ನಾಯ್ಕ, ಅಶೋಕ ಹೆಗಡೆ, ವಿವೇಕ ಭಟ್ಟ ಗಡಿಹಿತ್ಲು, ಜಿ ಎಂ ಭಟ್, ಸುಬ್ರಾಯ ಸಾಯಿಮನೆ, ಪಿ ಕೆ ನಾಯ್ಕ, ಸಿ ಎನ್ ಹೆಗಡೆ, ಕೆ ಆರ್ ವಿನಾಯಕ, ಕೇಶವ ದೊಡ್ಮನೆ, ಸುಧೀರ ಗೌಡ ಹಾಗೂ ಟಿಎಂಎಸ್ ಸಿಇಓ ಸತೀಶ ಹೆಗಡೆ ಸೇರಿದಂತೆ ಅನೇಕ ಸಹಕಾರಿ ಧುರೀಣರು ಶಾಸಕರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ ಅವರು `ನಾನೂ ಒಬ್ಬ ಅಡಿಕೆ ಬೆಳೆಗಾರರ. ಬೆಳೆಗೆ ತಗುಲಿದ ರೋಗ, ಬೆಳೆ ಕುಸಿತಗಳಿಂದ ಬೆಳೆಗಾರರಿಗೆ ಉಂಟಾದ ಸಂಕಷ್ಟ ಅರಿವಿಗಿದೆ. ಸರಕಾರದಿಂದ ನೆರವಿನ ಹಸ್ತ ಒದಗಿಸಲು ಸಿಎಂ ಅವರ ಗಮನಕ್ಕೂ ತರುತ್ತೇವೆ’ ಎಂದು ಹೇಳಿದ್ದಾರೆ.