`ಕೈಗಾ ಅಣು ವಿದ್ಯುತ್ ಘಟಕದ ನೇಮಕಾತಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ಕೊಡಬೇಕು’ ಎಂದು ಆಗ್ರಹಿಸಿ ಹೋರಾಟ ಶುರುವಾಗಿದೆ. ನಗರದ ಎಲ್ಲಡೆ ಸಂಚಾರ ನಡೆಸಿದ ಪ್ರತಿಭಟನಾಕಾರರು ಕೈಗಾದ ಕಡೆ ಪ್ರಯಾಣ ಬೆಳಸಿದ್ದಾರೆ.
`ನೇಮಕಾತಿಗಾಗಿ ನಡೆಸುವ ಪರೀಕ್ಷೆಯನ್ನು ಬೇರೆ ಬೇರೆ ಕಡೆ ಮಾಡುವ ಬದಲು ಜಿಲ್ಲೆಯಲ್ಲೇ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು’ ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಶನಿವಾರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆ ಶುರುವಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾಕಾರರು ಸಂಚರಿಸಿದ್ದಾರೆ. ಇಲ್ಲಿನ ಸುಭಾಷಚಂದ್ರ ಬೋಸ್ ವೃತ್ತ, ಹೆಂಜಾ ನಾಯ್ಕ ವೃತ್ತದ ಶಿವಾಜಿ ಪ್ರತಿಮೆ ಹಾಗೂ ಅಂಬೇಡ್ಕರ್ ವೃತ್ತದ ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರತಿಭಟನಾಕಾರರು ಕಾರವಾರ-ಕದ್ರಾ ಮಾರ್ಗವಾಗಿ ಪಾದಯಾತ್ರೆ ಮುಂದುವರೆಸಿದ್ದಾರೆ.
`ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಜಿಲ್ಲೆಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ ಆಗಿಲ್ಲ. ಸ್ಥಳೀಯರಿಗೆ ಸಹ ಇಲ್ಲಿ ಉದ್ಯೋಗ ಸಿಗುತ್ತಿಲ್ಲ. ಸದ್ಯ 5 & 6ನೇ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಇಲ್ಲಿನ 300ಕ್ಕೂ ಅಧಿಕ ಹುದ್ದೆಗಳಿಗೆ ಬಿಹಾರದ ಜನರನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ನಿರುದ್ಯೋಗಿಗಳಿಗೆ ಸಮಸ್ಯೆ ಆಗಿದೆ’ ಎಂದು ಪ್ರತಿಭಟನೆ ನೇತ್ರತ್ವವಹಿಸಿದ್ದ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ರಾಘು ನಾಯ್ಕ ಅವರು ದೂರಿದರು.
ಸದಾಶಿವಗಡ, ಹಣಕೋಣ ಮಾರ್ಗವಾಗಿ ಸಾಗಲಿರುವ ಈ ಪಾದಯಾತ್ರೆಯು ಹೊಟೆಗಾಳಿ ಮತ್ತು ಕದ್ರಾದಲ್ಲಿ ವಾಸ್ತವ್ಯ ಹೂಡಲಿದೆ. ಎರಡು ದಿನಗಳ ನಿರಂತರ ಪ್ರಯಾಣದ ನಂತರ ಕೈಗಾ ಯೋಜನಾ ಪ್ರದೇಶವನ್ನು ತಲುಪಿ ಅಲ್ಲಿ ಮನವಿ ಸಲ್ಲಿಸುವ ಬಗ್ಗೆ ಯೋಚಿಸಲಾಗಿದೆ. ಬೇಡಿಕೆ ಈಡೇರದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಲಾಗಿದೆ. ಹೋರಾಟಗಾರ ಬಾಬು ಅಂಬಿಗ, ದೀಪಕ ಕುಡಾಲ್ಕರ್ ಸೇರಿ ಅನೇಕರು ಈ ಹೋರಾಟದಲ್ಲಿ ಜೊತೆಯಾಗಿದ್ದಾರೆ.