ಹೊನ್ನಾವರದಿಂದ ಮುರುಡೇಶ್ವರ ಕಡೆಗೆ ವೇಗವಾಗಿ ಸಂಚರಿಸಿದ ಕ್ಯಾಂಟರ್ ಒಂದು ಬೈಲೂರು ಕ್ರಾಸಿನ ಬಳಿ ಡಿವೈಡರಿಗೆ ಗುದ್ದಿದ್ದು, ನಂತರ ಟಾಕ್ಟರಿಗೆ ಬಡಿದಿದೆ. ಪರಿಣಾಮ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ.
ಫೆಬ್ರವರಿ 19ರಂದು ಬೆಳಗಾವಿಯ ಶಂಕರ ಯಲ್ಲಪ್ಪ ಅಷ್ಟೇಕರ ಅವರು ಕ್ಯಾಂಟರ್ ಓಡಿಸುತ್ತಿದ್ದರು. ಸಂಜೆ ವೇಳೆ ಅವರು ಹೊನ್ನಾವರ ದಾಟಿದ್ದು, ತಮ್ಮ ವಾಹನದ ವೇಗ ಹೆಚ್ಚಿಸಿದರು. ಆ ಅವಾಂತರಕ್ಕೆ ಮುಂಡಗೋಡ ಚೌಡಳ್ಳಿಯ ಮೋಹನ (ಮಣಿಕಂಠ) ನಾಗರಾಜ ಶಿಂಧೆ ಅವರು ಸಾವನಪ್ಪಿದರು.
ಮೋಹನ ಶಿಂದೆ ಅವರು ರಸ್ತೆಯ ಡಿವೈಡರ್ ಹತ್ತಿರ ಸ್ವಚ್ಚ ಮಾಡುವ ಕೆಲಸ ಮಾಡುತ್ತಿದ್ದ ಐ ಆರ್ ಬಿ ಕಂಪನಿಯ ಸಬ್ ಕಂಟ್ರಾಕ್ಟರ್ ಧನಶ್ರೀ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದರು. ಕ್ಯಾಂಟರ್ ಗುದ್ದಿದ ರಭಸಕ್ಕೆ ಅವರ ಎರಡು ಕಾಲುಗಳಿಗೆ ಗಾಯವಾಗಿದ್ದು, ಉಡುಪಿ ಆಸ್ಪತ್ರೆಗೆ ಕರೆದೊಯ್ದರು ಸಹ ಬದುಕಿಸಿಕೊಳ್ಳಲು ಆಗಲಿಲ್ಲ. ಫೆಬ್ರವರಿ 20ರಂದು ಅವರು ಕೊನೆಯುಸಿರೆಳೆದರು.
ಈ ಅವಘಡದಲ್ಲಿ ಇನ್ನೊಬ್ಬ ಕೂಲಿ ಕಾರ್ಮಿಕ ಉತ್ತರ ಪ್ರದೇಶದ ಗುಡ್ಡುಕುಮಾರ್ ಭಾವಿಲಾಲ್ ಅವರು ಸಹ ಗಾಯಗೊಂಡಿದ್ದಾರೆ. ಕ್ಯಾಂಟರ್ ವಾಹನ ಟ್ರ‍್ಯಾಕ್ಟರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದರಿಂದ ಟ್ರ‍್ಯಾಕ್ಟರ್ ಚಾಲಕನ ಎದೆಗೆ ಒಳನೋವು ಆಗಿದೆ. ಈ ಕುರಿತು ಗಾಯಾಳು ಗುಡ್ಡುಕುಮಾರ್ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.