ಶಿರಸಿ ಮಾರಿಕಾಂಬಾ ದೇವಿಯ ಹೆಸರಿನಲ್ಲಿ ದುಡ್ಡು ದೋಚಲು ಮುಂದಾಗಿದ್ದ `ಯಜಮಾನ’ ಪೇಜ್ ಪ್ರಮುಖರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. ಅದಕ್ಕೂ ಬಗ್ಗದ ವಂಚಕರು ಶ್ರೀಗಳೊಬ್ಬರ ವಿಡಿಯೋ ದುರುಪಯೋಗಪಡಿಸಿಕೊಂಡು ತಮ್ಮ ವಂಚನೆ ಜಾಲವನ್ನು ಇನ್ನಷ್ಟು ವಿಸ್ತರಿಸಿದ್ದಾರೆ.
`ಯಜಮಾನ’ ಎಂಬ ಜಾಲತಾಣದ ಪುಟ ಹಾಗೂ ಮಾರಿಕಾಂಬಾ ದೇಗುಲಕ್ಕೆ ಯಾವುದೇ ಸಂಬAಧ ಇಲ್ಲ. ಅದಾಗಿಯೂ `ಯಜಮಾನ’ ಪೇಜ್ ಪ್ರಮುಖರು ಮಾರಿಕಾಂಬಾ ದೇವಿ ಹೆಸರಿನಲ್ಲಿ ಪೂಜೆ ಮಾಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಮೊಬೈಲ್ ಮಿಡಿಯಾ ನೆಟ್ವರ್ಕನ ಅಂಗ ಸಂಸ್ಥೆ mobiletime.in ವರದಿ ಪ್ರಸಾರ ಮಾಡಿದ್ದು, ಮಾರಿಕಾಂಬಾ ದೇವಿ ಹೆಸರಿನಲ್ಲಿ ಆನ್ಲೈನ್ ಸೇವೆಪಡೆದು ಮೋಸ ಹೋಗದಂತೆ ದೇಗುಲ ಆಡಳಿತ ಮಂಡಳಿಯೂ ವಿನಂತಿಸಿದೆ. ಅದರ ಬೆನ್ನಲ್ಲೆ `ಯಜಮಾನ’ ಪೇಜ್ ಪ್ರಮುಖರ ವಿರುದ್ಧ ಶಿರಸಿ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಅದಾಗಿಯೂ, ಅವರ ವಂಚನೆ ನಿಂತಿಲ್ಲ.
ಎಐ ಆಧಾರಿತ ವಿಡಿಯೋ ರಚಿಸಿ ಮಾರಿಕಾಂಬಾ ದೇವಿಗೆ ಆನ್ಲೈನ್ ಸೇವೆ ಸಲ್ಲಿಸುವ ವಿಡಿಯೋ ಯಜಮಾನ ಪೇಜಿನಿಂದ ಡಿಲಿಟ್ ಆಗಿಲ್ಲ. ಅದರೊಂದಿಗೆ ಸ್ಥಳೀಯ ಶ್ರೀಗಳೊಬ್ಬರು ದೇವಿ ಪೂಜೆ ನಡೆಸುವ ಚಿತ್ರಣಗಳನ್ನು ಬಳಸಿ ಮತ್ತೊಂದು ವಿಡಿಯೋ ಅದೇ ಪುಟದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿಯೂ ಸಹ ಶಿರಸಿ ಜಾತ್ರೆಯ ಸೀಮಿತ ಅವಕಾಶದ ಬಗ್ಗೆ ಪ್ರಚಾರ ಮಾಡಲಾಗಿದ್ದು, 151ರೂಪಾಯಿಗೆ ಕುಂಕುಮ ಅರ್ಚನೆ ಮಾಡಿಸುವುದಾಗಿ ವ್ಯಾಪಕ ಪ್ರಮಾಣದಲ್ಲಿ ಪ್ರಚಾರ ಮಾಡಲಾಗುತ್ತಿದೆ.
Advertisement. Scroll to continue reading.
ಈ ಮೊದಲು 351ರೂಪಾಯಿಗೆ ಸೀರೆ ಉಡಿ ಸಲ್ಲಿಸಿ ಕೋರಿಯರ್ ಮೂಲಕ ಪ್ರಸಾದ ರವಾನಿಸುವುದಾಗಿ ಯಜಮಾನ ಪೇಜ್ ಪ್ರಮುಖರು ಹೇಳಿಕೊಂಡಿದ್ದರು. ಅನೇಕರು ಈ ವಿಡಿಯೋಗೆ ಭಕ್ತಿಪೂರ್ವಕವಾಗಿ ಕಮೆಂಟ್ ಮಾಡಿದ್ದು, ಅದಾದ ನಂತರ ಇದೊಂದು ವಂಚನೆ ಪ್ರಯತ್ನ ಎಂದು ಭಕ್ತರೇ ಕಮೆಂಟ್ ಬಾಕ್ಸಿನಲ್ಲಿ ಬರೆದಿದ್ದರು. ಇದೇ ವಿಷಯವಾಗಿ ಶಿರಸಿ ಮಾರಿಕಾಂಬಾ ದೇಗುಲ ಆಡಳಿತ ಮಂಡಳಿಯವರು ಪ್ರಕಟಣೆ ನೀಡಿದ ನಂತರ ಭಕ್ತರು ಜಾಗೃತರಾಗಿದ್ದರು. ಈ ಎಲ್ಲಾ ವಿದ್ಯಮಾನಗಳ ನಡುವೆ ಆನ್ಲೈನ್ ವಂಚಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೆ ವಂಚಕರು ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ.