ಸಿದ್ದಾಪುರ ಮಲಕಾರುವಿನ ಚಂದ್ರಶೇಖರ ಹೆಗಡೆ ಹಾಗೂ ಅವರ ಪುತ್ರ ವಿದ್ಯಾದರ ಹೆಗಡೆ ಅವರ ಮೇಲೆ ಅವರ ಕುಟುಂಬದವರೇ ಬೆತ್ತದಿಂದ ಹೊಡೆದಿದ್ದಾರೆ. ಬೆಟ್ಟದ ದಾರಿ ಹಕ್ಕಿನ ವಿಷಯದಲ್ಲಿ ಈ ಹೊಡೆದಾಟ ನಡೆದಿದೆ.
ಸಿದ್ದಾಪುರದ ಮಲಕಾರು ಬಳಿಯ ಕಕ್ಕರಸವಲಿನಲ್ಲಿ ಚಂದ್ರಶೇಖರ ರಾಮಕೃಷ್ಣ ಹೆಗಡೆ ಹಾಗೂ ಅವರ ಪುತ್ರ ವಿದ್ಯಾಧರ ಹೆಗಡೆ ಅವರು ವಾಸವಾಗಿದ್ದಾರೆ. ಮುಠ್ಠಲಿ ಗ್ರಾಮದ ಸರ್ವೇ ನಂ 108/2ರಲ್ಲಿ ಅವರ ಕುಟುಂಬಕ್ಕೆ ತೋಟವಿದೆ. ಚಂದ್ರಶೇಖರ ಹೆಗಡೆ ಅವರ ದೊಡ್ಡಪ್ಪನ ಮಗನಾದ ಲಕ್ಷೀನಾರಾಯಣ ಮಹಾಬಲೇಶ್ವರ ಹೆಗಡೆ ಅವರಿಗೂ ಅದೇ ಭಾಗದಲ್ಲಿ ತೋಟವಿದ್ದು, ಈ ಎರಡು ತೋಟಕ್ಕೆ ಹೋಗಲು ಅಲ್ಲಿನ ಬೆಟ್ಟದಲ್ಲಿ ದಾರಿ ಮಾಡಲಾಗಿದೆ. ಆದರೆ, ಆ ದಾರಿಯಲ್ಲಿ ಚಂದ್ರಶೇಖರ ಹೆಗಡೆ ಅವರ ಕುಟುಂಬದವರು ಓಡಾಡಲು ಲಕ್ಷೀನಾರಾಯಣ ಹೆಗಡೆ ಕುಟುಂಬದವರು ಅಡ್ಡಿಪಡಿಸುತ್ತಿದ್ದಾರೆ.
ಅದಾಗಿಯೂ, ಚಂದ್ರಶೇಖರ ಹೆಗಡೆ ಅವರು ಅದೇ ದಾರಿಯಲ್ಲಿ ಓಡಾಡುತ್ತಾರೆ. ಚಂದ್ರಶೇಖರ ಹೆಗಡೆ ಅವರ ಕೆಲಸಕ್ಕೆ ಬರುವ ಆಳುಗಳು ಸಹ ಅದೇ ದಾರಿಯನ್ನು ಬಳಸುತ್ತಾರೆ. ಹೀಗಾಗಿ ಲಕ್ಷೀನಾರಾಯಣ ಹೆಗಡೆ ಕುಟುಂಬದವರ ಆಕ್ರೋಶ ಹೆಚ್ಚಿದ್ದು, ಫೆಬ್ರವರಿ 21ರಂದು ಸಹ ಈ ದಾರಿ ಬಳಕೆ ಮಾಡಿದ ಕಾರಣ ಹೊಡೆದಾಟ ನಡೆದಿದೆ. ಆ ದಿನ ಚಂದ್ರಶೇಖರ ಹೆಗಡೆ ಅವರು ಬೆಟ್ಟದ ದಾರಿ ಮೂಲಕ ಕರಡ ಸಾಗಿಸುತ್ತಿರುವಾಗ ಲಕ್ಷೀನಾರಾಯಣ ಹೆಗಡೆ ಅವರು ಆಳುಗಳನ್ನು ಅಡ್ಡಗಟ್ಟಿದ್ದು ಹೊಡೆದಾಟಕ್ಕೆ ಕಾರಣವಾಗಿದೆ.
`ಈ ರಸ್ತೆಯಲ್ಲಿ ಹೋಗಬೇಡ’ ಎಂದು ಲಕ್ಷೀನಾರಾಯಣ ಹೆಗಡೆ ಅವರು ತಾಕೀತು ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಲಕ್ಷೀನಾರಾಯಣ ಹೆಗಡೆ ಅವರ ಸಹೋದರ ರಮೇಶ ಹೆಗಡೆ ಅವರು ಚಂದ್ರಶೇಖರ ಹೆಗಡೆ ಅವರನ್ನು ದೂಡಿದ್ದಾರೆ. ತಂದೆ ಮೇಲೆ ಹಲ್ಲೆ ನಡೆಯುವುದನ್ನು ತಪ್ಪಿಸಲು ವಿದ್ಯಾನಂದ ಹೆಗಡೆ ಅವರು ಧಾವಿಸಿದ್ದು, ಅಲ್ಲಿಯೇ ಇದ್ದ ಲಕ್ಷೀನಾರಾಯಣ ಹೆಗಡೆ ಅವರ ಪತ್ನಿ ಶಾಂತಲಾ ಹೆಗಡೆ ಅವರು ವಿದ್ಯಾನಂದ ಹೆಗಡೆ ಅವರಿಗೆ ಬೆತ್ತದಿಂದ ಹೊಡೆದಿದ್ದಾರೆ.
ಈ ನೋವು ಸಹಿಸದ ಚಂದ್ರಶೇಖರ ಹೆಗಡೆ ಅವರು ಪೊಲೀಸರ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ಆದ ದಾಳಿಯ ಬಗ್ಗೆ ವಿವರಿಸಿ ದೂರು ನೀಡಿದ್ದಾರೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.