ಯಲ್ಲಾಪುರದ ಬಾಚಿನಳ್ಳಿಯಲ್ಲಿರುವ ಸರಸ್ವತಿ ಸಿದ್ದಿ ಅವರ ಮನೆಯಲ್ಲಿ ತಿಥಿ ನಡೆದಿದ್ದು, ಆ ಮನೆಯೊಳಗೆ ಪ್ರವೇಶಿಸಿದ ಮಂಚಿಕೇರಿಯ ಅಬ್ದುಲ್ ರೆಹಮಾನ್ ಅವರು ಅಲ್ಲಿದ್ದ ಮಹಿಳೆಯೊಬ್ಬರ ಮೈ ಮುಟ್ಟಿದ್ದಾರೆ. ಜೊತೆಗೆ ಮತ್ತೊಬ್ಬ ಮಹಿಳೆಯ ಬಗ್ಗೆ ವಿಚಾರಿಸಿ, ಸಿದ್ದಿ ಸಮುದಾಯದ ಬಗ್ಗೆ ನಿಂದನಾರ್ಹ ಮಾತುಗಳನ್ನು ಆಡಿದ್ದಾರೆ.
ಯಲ್ಲಾಪುರದ ಬಾಚನಳ್ಳಿಯ ಸಾವಿತ್ರಿ ನಾಗೇಂದ್ರ ಸಿದ್ದಿ ಅವರು ಮಂಚಿಕೇರಿಯಲ್ಲಿ ಮಾಲ್ಕಿ ಮರ ಕಟಾವು ಮಾಡುವ ಅಬ್ದುಲ್ ರೆಹಮಾನ್ ದಾವುದ್ ಶೇಖ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಮಂಚಿಕೇರಿ ಚರ್ಚ ರಸ್ತೆಯ ಅಬ್ದುಲ್ ರೆಹಮಾನ್ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. `ತಮ್ಮ ಅಜ್ಜಿ ಸರಸ್ವತಿ ಸಿದ್ದಿ ಅವರ ಮನೆಯಲ್ಲಿ ತಿಥಿ ಊಟಕ್ಕೆ ಹೋದಾಗ ಅಲ್ಲಿಗೆ ಅಬ್ದುಲ್ ರೆಹಮಾನ್ ಅವರು ಆಗಮಿಸಿದ್ದರು. ಮನೆಯೊಳಗೆ ನುಗ್ಗಿ ಮಂಗಲಾ ಎಲ್ಲಿ? ಎಂದು ಅವರು ಪ್ರಶ್ನಿಸಿದರು. ಗೊತ್ತಿಲ್ಲ ಎಂದು ಹೇಳಿದಾಗ, ಆಕೆಯನ್ನು ನೀವೇ ಅಡಗಿಸಿಟ್ಟಿದ್ದೀರಿ.. ಸಿದ್ದಿ ಸೂ.. ಹೆಂಗಸರು ಎಂದು ಬೈದರು. ಅದಾದ ನಂತರ ತನ್ನ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದರು’ ಎಂದು ಸಾವಿತ್ರಿ ಸಿದ್ದಿ ಅವರು ವಿವರಿಸಿದ್ದಾರೆ. ಜೊತೆಗೆ `ಸರಾಯಿ ಕುಡಿದು ಸಿಗರೇಟು ಸೇದುತ್ತಲೇ ತಮ್ಮ ಬಟ್ಟೆ ಹರಿದು ಅವಮಾನ ಮಾಡಿದ್ದಾರೆ’ ಎಂದು ದೂರಿದ್ದಾರೆ. `ಲಲತಾ ಕೃಷ್ಣ ಸಿದ್ದಿ ಹಾಗೂ ಮಾಲಾ ಪ್ರಭಾಕರ ಸಿದ್ದಿ ಅವರ ಜೊತೆಯೂ ಅಬ್ದುಲ್ ರೆಹಮಾನ್ ಅನುಚಿತವಾಗಿ ವರ್ತಿಸಿದ್ದು, ತಮ್ಮ ಗಂಡನಿಗೆ ಫೋನ್ ಮಾಡಿ ತಿಳಿಸಿದಾಗ ಅವರು ಬಂದು ನಮ್ಮನ್ನು ಕಾಪಾಡಿದ್ದಾರೆ’ ಎಂದವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಅಬ್ದುಲ್ ರೆಹಮಾನ್ ಅವರು ಸಹ ಪೊಲೀಸರ ಮುಂದೆ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ. `ಬಾಚಿನಳ್ಳಿಯಲ್ಲಿರುವ ಲೋಕೇಶ ಸಿದ್ದಿ ಮನೆ ಎದುರಿನ ರಸ್ತೆಯಲ್ಲಿ ಚಿಕ್ಕಬಿಳಕಿಯ ಮೋತೇಶ ಮಸಣ್ಯ ಸಿದ್ದಿ ಅವರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ’ ಎಂದು ಅಬ್ದುಲ್ ರೆಹಮಾನ್ ಅವರು ದೂರಿದ್ದಾರೆ. `ತಮ್ಮ ಕಾರಿನ ಚಾಲಕ ಇಮ್ತಿಯಜ್ ಅವರ ಜೊತೆ ಕಾರಿನಲ್ಲಿ ಬಾಚಿನಳ್ಳಿಗೆ ಹೋಗಿದ್ದು, ಮೋತೇಶ ಮಸಣ್ಯ ಸಿದ್ದಿ, ನಾಗೇಂದ್ರ ಫಕ್ಕೀರಪ್ಪ ಸಿದ್ದಿ, ಪಬ್ಬು ಸಿದ್ದಿ, ಮಾಲಾ ಪಬ್ಬು ಸಿದ್ದಿ, ಅವರಿಗೆ ಕೆಲಸಕ್ಕೆ ಬರುವಂತೆ ಸೂಚಿಸಿದೆ. ಈ ವೇಳೆ ಮಾಲಾ ಜೊತೆ ಮಾತನಾಡುವುದನ್ನು ತಪ್ಪಾಗಿ ಭಾವಿಸಿದ ಮೋತೇಶ್ ಸಿದ್ದಿ ನಮ್ಮ ಜಾತಿ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುತ್ತೀಯಾ? ಎಂದು ಪ್ರಶ್ನೆ ಮಾಡಿದರು. ತಮ್ಮ ಸೊಂಟದಲ್ಲಿದ್ದ ಬೆಲ್ಟಿನಿಂದ ಹೊಡೆದು ಗಾಯ ಮಾಡಿದರು’ ಎಂದು ಅಬ್ದುಲ್ ರೆಹಮಾನ್ ಅವರು ದೂರಿದ್ದಾರೆ.
ಎರಡು ಕಡೆಯವರ ಮಾತು ಆಲಿಸಿದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ತನಿಖೆಯನ್ನು ಮುಂದುವರೆಸಿದ್ದಾರೆ.