`ಬೆಂಗಳೂರಿನಿoದ ಮಂಗಳೂರಿನವರೆಗೆ ಸಂಚರಿಸಲು ಸಿದ್ಧವಾಗಿರುವ ವಂದೇ ಭಾರತ್ ರೈಲನ್ನು ಕಾರವಾರದವರೆಗೂ ವಿಸ್ತರಿಸುವ ಪ್ರಯತ್ನ ನಡೆದಿದೆ’ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ
ಸಚಿವ ವಿ ಸೋಮಣ್ಣ ಅವರು ಹೇಳಿದ್ದಾರೆ.
ಶನಿವಾರ ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ ದಾಂಡೇಲಿ ಯಿಂದ ಅಳ್ನಾವರದವರೆಗೆ ಸಂಚರಿಸುವ ರೈಲಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದ್ದು, `ಅಂಕೋಲಾ -ಹುಬ್ಬಳ್ಳಿ ರೈಲು ಮಾರ್ಗವನ್ನು 17000 ಕೋಟಿ ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿ ಕುರಿತಂತೆ ಶೀಘ್ರದಲ್ಲಿ ಅಗತ್ಯವಿರುವ ಎಲ್ಲಾ ಅನುಮತಿ ದೊರೆಯಲಿದೆ’ ಎಂದರು. `ಅಳ್ನಾವರ- ಡಾಂಡೇಲಿ ರೈಲನ್ನು ಹುಬ್ಬಳ್ಳಿವರೆಗೂ ವಿಸ್ತರಿಸಲಾಗುತ್ತದೆ’ ಎಂದರು. `ರಾಜ್ಯದಲ್ಲಿ 52,952 ಕೋಟಿ ವೆಚ್ಚದಲ್ಲಿ ರೈಲ್ವೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಸುಮಾರು 3,840 ಕಿಮೀ ಹೊಸ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. 707 ಮೆಲ್ಸೇತುವೆ ಮತ್ತು ಕೆಳಸೇತುವೆ ಮಾಡಲಾಗಿದ್ದು, 61 ರೈಲ್ವೆ ನಿಲ್ದಾಣ ನವೀಕರಣ ಮಾಡಲಾಗುತ್ತಿದ್ದು ಹಲವು ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಣ ಮಾಡಲಾಗುತ್ತದೆ’ ಎಂದು ತಿಳಿಸಿದರು.
`ರಾಜ್ಯದಲ್ಲಿ ಈ ಹಿಂದೆ ಸಂಚರಿಸುತ್ತಿದ್ದು ಪ್ರಸ್ತುತ ಸ್ಥಗಿತಗೋಂಡಿರುವ ರೈಲುಗಳನ್ನು ಆದ್ಯತೆಯ ಮೇರೆಗೆ ಪುನಾರಂಭ ಮಾಡಲಾಗುತ್ತದೆ’ ಎಂದು ಘೋಷಿಸಿದರು. ಶಾಸಕ ಆರ್ ವಿ ದೇಶಪಾಂಡೆ ಮಾತನಾಡಿ `ಹಿಂದೆ ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಪ್ರಯತ್ನದಿಂದ ಅಳ್ನಾವರ ಡಾಡೇಲಿ ರೈಲು ಆರಂಭ ಗೊಂಡಿದ್ದು, ಈ ರೈಲನ್ನು ನಿರಂತರವಾಗಿ ಓಡಾಟ ನಡೆಸುವ ಉದ್ದೇಶದಿಂದ ಈ ರೈಲನ್ನು ಹುಬ್ಬಳ್ಳಿ ಅಥವಾ ಬೆಳಗಾವಿಗೆ ಸಂಪರ್ಕ ಮಾಡಬೇಕು. ಭಾನುವಾರ ಕೂಡಾ ಚಲಿಸಲು ಅವಕಾಶ ನೀಡಬೇಕು. ಈ ಹಿಂದೆ ಸ್ಥಗಿತವಾಗಿದ್ದ ಹುಬ್ಬಳ್ಳಿ ಪಂಡಾರಪುರ ನೇರ ರೈಲು ಸೇವೆಯನ್ನು ಮತ್ತು ಸ್ಥಗಿತ ಗೊಂಡಿರುವ ಮಿರಜ್- ಕ್ಯಾಸಲ್ ರಾಕ್ ಪ್ರಯಾಣಿಕ ರೈಲು ಸೇವೆಯನ್ನು ಪುನರಾರಾಂಭಿಸಬೇಕು’ ಎಂದರು.
ಸAಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ `ತಾಳಗುಪ್ಪ – ಶಿರಸಿ – ಮುಂಡಗೋಡ – ಹುಬ್ಬಳ್ಳಿ ರೈಲು ಮಾರ್ಗದ ಸರ್ವೇ ಕೆಲಸ ಆಗಿದ್ದು, ಡಿಪಿಆರ್ ಹಂತದಲ್ಲಿದೆ. ಡಾoಡೇಲಿ ರೈಲ್ವೆ ನಿಲ್ದಾಣಕ್ಕೆ ಸಾರಿಗೆ ಬಸ್ ವ್ಯವಸ್ಥೆ ಆಗಬೇಕು. ಜಿಲ್ಲೆಯಲ್ಲಿ ಕೇಂದ್ರ ಯೋಜನೆಗಳನ್ನು ಜನತೆಗೆ ಪಕ್ಷಾತೀತವಾಗಿ ತಲುಪಿಸಲಾಗುತ್ತಿದೆ’ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನಿಲ್ ಹೆಗಡೆ, ರೂಪಾಲಿ ನಾಯ್ಕ, ಘೋಟ್ನೆಕರ್, ಉಪವಿಭಾಗಾಧಿಕಾರಿ ಶ್ರವಣ ಕುಮಾರ್, ಹುಬ್ಬಳ್ಳಿ ವಿಭಾಗೀಯ ರೈಲ್ವೆಯ ಮೆನೇಜರ್ ಬೇಲಾಮೀನಾ, ಕೊಂಕಣ ರೈಲ್ವೆಯ ವಿಭಾಗೀಯ ಮೆನೇಜರ್ ಆಶಾ ಶೆಟ್ಟಿ, ಮುಖ್ಯ ವಾಣಿಜ್ಯ ಮೆನೇಜರ್ ಎಸ್ ಪಿ ಶಾಸ್ತ್ರಿ, ತಹಸೀಲ್ದಾರ್ ಶೈಲೇಶ್ ಪರಮಾನಂದ ಮತ್ತಿತರರು ಇದ್ದರು.