ಯಲ್ಲಾಪುರ ಜಾತ್ರೆ ಹಿನ್ನಲೆ ವಿವಿಧ ಸಂಘಟನೆಯವರು ಸ್ವಯಂ ಪ್ರೇರಣೆಯಿಂದ ವಿವಿಧ ಸಮಾಜಮುಖಿ ಕೆಲಸ ಮಾಡುತ್ತಿದ್ದು, ರವೀಂದ್ರ ನಗರದ ಯುವಕರು ಅಪಘಾತ ತಡೆಗಾಗಿ ರಸ್ತೆಗೆ ಬಿಳಿ ಬಣ್ಣ ಬಡಿದಿದ್ದಾರೆ.
ಫೆಬ್ರವರಿ 11ರಿಂದ 19ರವರೆಗೆ ಯಲ್ಲಾಪುರದಲ್ಲಿ ಅದ್ಧೂರಿಯಾಗಿ ಗ್ರಾಮದೇವಿ ಜಾತ್ರೆ ನಡೆಯಲಿದೆ. ಈ ಜಾತ್ರೆಗೆ ಲಕ್ಷಾಂತರ ಜನ ಬರುತ್ತಾರೆ. ಮುಂಡಗೋಡು ರಸ್ತೆಯ ಮೂಲಕವೂ ನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ. ಇಲ್ಲಿನ ರವೀಂದ್ರ ನಗರದ ಶಾಲೆ ಹಾಗೂ ಅಂಗನವಾಡಿ ಬಳಿ ರಸ್ತೆಗೆ ಅಡ್ಡಲಾಗಿ ಎರಡು ಹಂಪುಗಳಿದ್ದು, ಅಲ್ಲಿ ಅಪಘಾತವಾಗುವುದನ್ನು ಅರಿತ ಆ ಭಾಗದ ಜನ ಹಂಪುಗಳಿಗೆ ಬಣ್ಣ ಬಡಿದಿದ್ದಾರೆ.
ರಸ್ತೆ ದುರಸ್ಥಿ, ಅವೈಜ್ಞಾನಿಕ ಹಂಪುಗಳಿಗೆ ಮುಕ್ತಿ ಜೊತೆ ಅಪಘಾತ ತಡೆಗೆ ವಿವಿಧ ಕ್ರಮ ಜರುಗಿಸುವಂತೆ ಶಾಸಕ ಶಿವರಾಮ ಹೆಬ್ಬಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಮುಂಡಗೋಡು ರಸ್ತೆಯ ಶಾಲೆ ಹಾಗೂ ಅಂಗನವಾಡಿ ಬಳಿಯಿರುವ ಹಂಪುಗಳ ಬಗ್ಗೆ ಗಮನಹರಿಸಿಲ್ಲ. ಆ ಭಾಗದ ಜನ ಈ ಬಗ್ಗೆ ಪ್ರಶ್ನಿಸಿದರೂ ಸರಿಯಾಗಿ ಉತ್ತರ ನೀಡಿಲ್ಲ. ಹೀಗಾಗಿ ರವೀಂದ್ರ ನಗರದ ಹುಡುಗರೆಲ್ಲರೂ ಒಂದಾಗಿ ತಾವೇ ಹಂಪಿಗೆ ಬಣ್ಣ ಬಡಿದು ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಆ ಭಾಗದ ಸೋಮೇಶ್ವರ ನಾಯ್ಕ, ಕಾರ್ತಿಕ ನಾಯ್ಕ, ನಂದನ ಮರಾಠಿ, ಗಿರೀಶ ಬೋವಿ, ಮಂಜುನಾಥ ಬೋವಿ, ಶೈಲೇಶ್ ನಾಯ್ಕ, ಮನೋಜ ಪೋಳ್, ಇರ್ಫಾನ್ ಖಾನ್, ಮುಸ್ತಪಾ ತೆರಗಟ್ಟಿ, ಬೆಟ್ಟಪ್ಪ ಬೋವಿ ಒಟ್ಟಾಗಿ ಈ ಸಮಾಜಮುಖಿ ಕೆಲಸ ಮಾಡಿದ್ದಾರೆ. `ರಾತ್ರಿ ವೇಳೆ ಇಲ್ಲಿನ ಹಂಪುಗಳು ಸರಿಯಾಗಿ ಕಾಣುವುದಿಲ್ಲ. ಈ ಹಿಂದೆ ನಡೆದ ಜಾತ್ರೆ ಅವಧಿಯಲ್ಲಿ ಕೆಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಅದನ್ನು ತಡೆಯುವುದಕ್ಕಾಗಿ ದೇಣಿಗೆ ಸಂಗ್ರಹಿಸಿ ರಸ್ತೆಗೆ ಬಣ್ಣ ಬಡಿಯವ ಕೆಲಸ ಮಾಡಿದ್ದೇವೆ’ ಎಂದವರು ವಿವರಿಸಿದ್ದಾರೆ.