ಸರ್ಕಾರಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಗೆ ಬಸ್ಸಿನ ಹಿಂದೆ ಅಳವಡಿಸಿದ್ದ ನಾಮಫಲಕ ಬಡಿದು ಗಾಯಗೊಂಡಿದ್ದರೂ ಆ ವಿದ್ಯಾರ್ಥಿಯನ್ನು ಬಸ್ಸಿನ ನಿರ್ವಾಹಕಿ ಆಸ್ಪತ್ರೆಗೆ ಸೇರಿಸಿಲ್ಲ. ಬದಲಾಗಿ, ಆ ವಿದ್ಯಾರ್ಥಿಯನ್ನು ಬಸ್ಸಿನಿಂದ ಕೆಳಗಿಳಿಸಿ ಅಮಾನವೀಯ ಕೃತ್ಯ ಎಸಗಿದ್ದು, ಈ ಬಗ್ಗೆ ದೂರು ನೀಡಿದರೂ ನಿರ್ವಾಹಕಿ ವಿರುದ್ಧ ಕ್ರಮವಾಗಿಲ್ಲ.
Advertisement. Scroll to continue reading.
ಅಂಕೋಲಾದ ಪೂಜಗೇರಿ ಪ್ರಥಮ ದರ್ಜೆ ಕಾಲೇಜಿನ ಬಿ ಎ ದ್ವಿತೀಯ ವರ್ಷದ ವಿದ್ಯಾರ್ಥಿ ತ್ರೀಮೂರ್ತಿ ಶಾಂತಾ ನಾಯ್ಕ ಅವರು ಫೆ 23ರಂದು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದರು. ಭಟ್ಕಳ ಡಿಪೋದ ನಿರ್ವಾಹಕಿ ಸುನೀತಾ ಅವರು ಆ ಬಸ್ಸಿನ ಕರ್ತವ್ಯದಲ್ಲಿದ್ದು, ಅವರ ಅಮಾನವೀಯ ಕೃತ್ಯದ ಬಗ್ಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದಾಗಿಯೂ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಿರ್ವಾಹಕಿ ವಿರುದ್ಧ ಕಾನೂನು ಕ್ರಮ ಜರುಗಿಸದೇ ಮೃದು ದೋರಣೆ ಅನುಸರಿಸಿದ್ದಾರೆ.
ಬಸ್ಸಿನಲ್ಲಿ ನಡೆದ ಅನಾಹುತದಿಂದ ವಿದ್ಯಾರ್ಥಿಗೆ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಕೊಡಿಸುವುದು ನಿರ್ವಾಹಕಿಯ ಹೊಣೆಯಾಗಿತ್ತು. ಆದರೆ, ರಕ್ತದ ಮಡುವಿನಲ್ಲಿದ್ದ ಆ ವಿದ್ಯಾರ್ಥಿಯನ್ನು ರಸ್ತೆ ಮದ್ಯೆ ನಿರ್ವಾಹಕಿ ಬಿಟ್ಟು ಹೋದ ಬಗ್ಗೆ ಎಲ್ಲಡೆ ಆಕ್ಷೇಪವ್ಯಕ್ತವಾಗಿದೆ. ಭಟ್ಕಳ-ಕಾರವಾರ ಬಸ್ಸಿನಲ್ಲಿ ಇಂಥ ಅವಘಡ ನಡೆದ ಬಗ್ಗೆ ನಿಗಮದ ಅಧಿಕಾರಿಗಳ ಅರಿವಿಗೆ ಬಂದಿದೆ. ಆದರೂ, ಅವರು ಕ್ರಮ ಜರುಗಿಸಿಲ್ಲ.
ವಿದ್ಯಾರ್ಥಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡಿದ್ದರೂ ನಿರ್ವಾಹಕಿ ತಕ್ಷಣ ಪ್ರಥಮ ಚಿಕಿತ್ಸೆ ನೀಡದೆ, ಸ್ವಲ್ಪ ದೂರದಲ್ಲೇ ವಿದ್ಯಾರ್ಥಿಯನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ. ಅಸ್ವಸ್ಥನಾದ ವಿದ್ಯಾರ್ಥಿ ರಿಕ್ಷಾದಲ್ಲಿ ಸಂಚರಿಸಿ ಚಿಕಿತ್ಸೆಪಡೆದಿದ್ದಾರೆ. ಉಳಿದ ಪ್ರಯಾಣಿಕರು ಆಕ್ಷೇಪವ್ಯಕ್ತಪಡಿಸಿದ್ದರೂ ಆ ಆಕ್ರೋಶಕ್ಕೆ ನಿರ್ವಾಹಕಿ ಪ್ರತಿಕ್ರಿಯಿಸಿಲ್ಲ. ಈ ಹಿನ್ನಲೆ ವಿದ್ಯಾರ್ಥಿ ಪಾಲಕರು ಪೊಲೀಸ್ ದೂರು ನೀಡಿದ್ದಾರೆ. ಜೊತೆಗೆ ವಿದ್ಯಾರ್ಥಿ ಸಂಘಟನೆಯವರು ಹಾಗೂ ವಕೀಲ ಉಮೇಶ ನಾಯ್ಕ ಅವರು ನಿರ್ವಾಹಕಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.