ಯಲ್ಲಾಪುರದ ಮುಂಡಗೋಡು ರಸ್ತೆ ಬಳಿ ವಾಸಿಸುವ ಕಾರ್ತಿಕ ಬೋವಿವಡ್ಡರ್ ಅವರಿಗೆ ರವೀಂದ್ರ ನಗರದ ಅಬ್ದುಲ್ ಗೌಸ್ ಅವರು ಬೆದರಿಕೆ ಒಡ್ಡಿದ್ದಾರೆ. `ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರ ಜೊತೆ ತಿರುಗಾಟ ನಡೆಸಿದರೆ ಹುಷಾರ್’ ಎಂದು ಹೆದರಿಸಿದ್ದಾರೆ.
ಫೆಬ್ರವರಿ 28ರಂದು ಸೋಮೇಶ್ವರ ನಾಯ್ಕ ಅವರು ವಿಶಾಲ ವಾಳಂಬಿ ಅವರ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದು, ಅದೇ ವಿಷಯವಾಗಿ ಈ ಜಗಳ ನಡೆದಿದೆ. ಸುದ್ದಿಗೋಷ್ಠಿ ವಿಚಾರವಾಗಿ ಆ ದಿನ ರಾತ್ರಿ ರವೀಂದ್ರ ನಗರದ ಅಬ್ದುಲ್ ಮಹಮದ್ ಗೌಸ್ ಅವರು ಕಾರ್ತಿಕ ಬೋವಿವಡ್ಡರ್ ಅವರನ್ನು ಪ್ರಶ್ನಿಸಿದ್ದು, `ವಾಳಂಬಿ ಅವರ ತಂಟೆಗೆ ಬಂದರೆ ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಮುಂಡಗೋಡ ಆಂಜನೇಯ ದೇವಸ್ಥಾನದ ಎದುರು ಈ ಎಲ್ಲಾ ವಿದ್ಯಮಾನ ನಡೆದಿದೆ.
ಇದಕ್ಕೂ ಮೊದಲು ಕಾರ್ತಿಕ ಬೋವಿವಡ್ಡರ್ ಹಾಗೂ ಅವರ ಜೊತೆಗಿದ್ದ ನಿಖಿಲ್ ಅವರನ್ನು ಅಬ್ದುಲ್ ಗೌಸ್ ಅವರು ತಮ್ಮದೇ ಬೈಕಿನಲ್ಲಿ ಪೇಟೆಯಲ್ಲಿ ತಿರುಗಾಡಿಸಿದ್ದಾರೆ. ಅದಾದ ನಂತರ ಅವರನ್ನು ಮನೆಗೆ ಬಿಡಲು ಬಂದಿದ್ದು, ಸೋಮೇಶ್ವರ ನಾಯ್ಕ ಅವರ ಮನೆ ಮುಂದೆ ತಮ್ಮ ಬೈಕ್ ನಿಲ್ಲಿಸಿದ್ದಾರೆ. ಅಲ್ಲಿ ಸೋಮೇಶ್ವರ ನಾಯ್ಕ ಅವರ ಸ್ಕೂಟಿ ಇರುವುದನ್ನು ನೋಡಿ, ಅದಕ್ಕೆ ಬೆಂಕಿ ಹಚ್ಚುವುದಾಗಿ ಕೂಗಾಡಿದ್ದಾರೆ. ಅದಾದ ನಂತರ ಬಾಯಲ್ಲಿದ್ದ ಪಾನ್ ಮಸಾಲವನ್ನು ಆ ಸ್ಕೂಟರಿನ ಮೇಲೆ ಉಗಿದಿದ್ದಾರೆ.
ಅದಾದ ನಂತರ `ಪಾನ್ ಉಗಿದ ವಿಷಯವನ್ನು ಯಾರಿಗೂ ಹೇಳಬೇಡ’ ಎಂದು ಅಬ್ದುಲ್ ಗೌಸ್ ಅವರು ತಾಕೀತು ಮಾಡಿದ್ದಾರೆ. ಜೊತೆಗೆ ಕಾರ್ತಿಕ ನಾಗೇಶ ಬೋವಿವಡ್ಡರ್ ಅವರಿಗೆ `ಸೋಮೇಶ್ವರ ನಾಯ್ಕ ಅವರ ಜೊತೆ ತಿರುಗಬೇಡ’ ಎಂದು ಹೇಳಿದ್ದಾರೆ. `ಈ ವಿಷಯ ಹೇಳಿದರೆ ಕೊಂದು ಹಾಕುವೆ’ ಎಂದು ಎಚ್ಚರಿಸಿದ್ದಾರೆ. ಅದಾಗಿಯೂ, ಕಾರ್ತಿಕ ಬೊವಿವಡ್ಡರ್ ಅವರು ಈ ವಿಷಯದ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಅಬ್ದುಲ್ ಗೌಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.