ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಟಿವಿ ಜ್ಯೋತಿಷಿ ಕಮಲಾಕರ ಭಟ್ಟ ಅವರು ಜೈಲಿನಲ್ಲಿಯೂ ತಮ್ಮ ಜ್ಯೋತಿಷ್ಯದ ಮೂಲಕ ಕುಖ್ಯಾತಿಪಡೆದಿದ್ದಾರೆ. ಅಲ್ಲಿರುವ ಕೈದಿ ಹಾಗೂ ಜೈಲು ಸಿಬ್ಬಂದಿಗೆ ನಿತ್ಯವೂ ಭವಿಷ್ಯ ಹೇಳುವುದಾಗಿ ಅವರು ಕಾಡಿಸುತ್ತಿದ್ದು, ಕಮಲಾಕರ ಭಟ್ಟರ ಕಾಟಕ್ಕೆ ಅಲ್ಲಿದ್ದ ಎಲ್ಲರೂ ನಲುಗಿದ್ದಾರೆ!
ಟಿವಿ ಕ್ಯಾಮರಾದ ಮುಂದೆ ಬುರುಡೆ ಭವಿಷ್ಯ ನುಡಿದು ಪ್ರಸಿದ್ಧಿಪಡೆದಿದ್ದ ಸಿದ್ದಾಪುರದ ಕಮಲಾಕರ ಭಟ್ಟ ಅವರು ತಮ್ಮ ಕಚೇರಿ ಕೆಲಸದಾಕೆಯ ಸಹವಾಸಕ್ಕೆ ಬಿದ್ದು ಜೈಲು ಸೇರಿದ್ದಾರೆ. ಕೆಲಸದಾಕೆಯ ಕಾಮದ ಆಸೆಗೆ ಕೋಟಿ ರೂ ವೆಚ್ಚ ಮಾಡಿದ ಕಮಲಾಕರ ಭಟ್ಟ ಅವರು ಸುಮಿತ್ರಾ ನಾಯ್ಕ ಅವರ ಪತಿ ಮೇಲೆ ಹಲ್ಲೆ ನಡೆಸಲು ಹೋಗಿ ಪತಿಯ ಅಣ್ಣ ಮಹೇಶ ನಾಯ್ಕ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಆ ಜೈಲಿನಲ್ಲಿರುವ ಕೈದಿಗಳಿಗೆ ನಿತ್ಯವೂ `ನಿನ್ನ ಭವಿಷ್ಯ ಹೇಳುತ್ತೇನೆ. ಜಾತಕ ಹೇಳುತ್ತೇನೆ’ ಎನ್ನುತ್ತ ಕಮಲಾಕರ ಭಟ್ಟ ಅವರು ಬೆನ್ನು ಬಿದ್ದಿದ್ದಾರೆ. ಅದರಲ್ಲಿಯೂ `ವಶೀಕರಣ ಮಾಡಿಕೊಡುತ್ತೇನೆ’ ಎನ್ನುತ್ತ ಕೈದಿಗಳ ಜೊತೆ ಸ್ನೇಹ ಬೆಳೆಸುವ ಪ್ರಯತ್ನ ನಡೆಸಿದ್ದಾರೆ.
ಕಮಲಾಕರ ಭಟ್ಟ ಯಾವ ಕಾರಣಕ್ಕೆ ಜೈಲಿಗೆ ಬಂದರು? ಎಂಬುದನ್ನು ಅರಿಯದ ಕೆಲ ಕೈದಿಗಳು ಅವರ ಬಳಿ ಜ್ಯೋತಿಷ್ಯ ಕೇಳುತ್ತಿದ್ದು, ಇನ್ನೂ ಕೆಲ ಕೈದಿಗಳು ಡೋಂಗಿ ಜ್ಯೋತಿಷಿ ಮಾತನ್ನು ನಂಬುತ್ತಿಲ್ಲ. ಕೈದಿಗಳಿಗೆ ಮಾತ್ರವಲ್ಲದೇ ಕಾರಾಗೃಹ ಸಿಬ್ಬಂದಿಗೂ ಸಹ ಕಮಲಾಕರ ಭಟ್ಟ ಜ್ಯೋತಿಷ್ಯ ಹೇಳುವುದಾಗಿ ಹೇಳಿದ್ದಾರೆ. `ನಿನ್ನ ಭವಿಷ್ಯ ನಿನಗೆ ಗೊತ್ತಿದ್ದರೆ ಇಲ್ಲಿ ಏಕೆ ಬರುತ್ತಿದ್ದೆ?’ ಎಂದು ಕಾರಾಗೃಹ ಸಿಬ್ಬಂದಿ ಮರುಪ್ರಶ್ನೆ ಹಾಕಿದ್ದಾರೆ. ಆ ಪ್ರಶ್ನೆಗೆ ಉತ್ತರಿಸಲಾಗದೇ ಕಮಲಾಕರ ಭಟ್ಟ ಅವರು ಅವಮಾನ ಅನುಭವಿಸಿದ್ದಾರೆ.