ಕಾರವಾರ ಮೆಡಿಕಲ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ಗೋವಾದ ಪೋಳೆಂ’ಗೆ ಹೋಗಿದ್ದು, ಅಲ್ಲಿಂದ ಮರಳುವಾಗ ಅವರ ಬೈಕ್ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಸಾವನಪ್ಪಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ.
ಚಿತ್ರದುರ್ಗದ ಪ್ರೀತಂ ಅವರು ಕಾರವಾರ ಮೆಡಿಕಲ್ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಸೋಮವಾರ ರಾತ್ರಿ ಅವರು ತಮ್ಮ ಸ್ನೇಹಿತರ ಜೊತೆ ಗೋವಾಗೆ ಹೋಗಿದ್ದರು. ಪೋಳಂ ಬಳಿಯ ಹೊಟೇಲಿನಲ್ಲಿ ಊಟ ಮುಗಿಸಿ ಮರಳುವಾಗ ಅವರ ಬೈಕ್ ಅಪಘಾತಕ್ಕೀಡಾಯಿತು.
ಕ್ಲೌಡ್-9 ಹೊಟೇಲ್ ಬಳಿ ಈ ಅವಘಡ ನಡೆದಿದ್ದು, ಪ್ರೀತಂ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಗಾಯಗೊಂಡ ಮತ್ತೊಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಹೆದ್ದಾರಿ ಅಂಚಿನಲ್ಲಿ ಬೀದಿ ದೀಪಗಳು ಸರಿಯಾಗಿಲ್ಲದ ಕಾರಣ ಅಪಘಾತ ಪ್ರಮಾಣ ಹೆಚ್ಚಾದ ಆರೋಪವಿದೆ. ಪೊಲೀಸರು ಸ್ಥಳ ಭೇಟಿ ನಡೆಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.