ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನದಿಗಳನ್ನು ಉಳಿಸುವುದಕ್ಕಾಗಿ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತಿ ಶ್ರೀ ಸಂಕಲ್ಪ ಮಾಡಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು `ಭಗೀರಥ’ ಎಂಬ ವೆಬ್‌ಸೈಟ್’ಗೆ ಚಾಲನೆ ನೀಡಿದ್ದಾರೆ.
ಈ ಆಂದೋಲನದ ಅಂಗವಾಗಿ ನದಿ ಉಳಿಸುವಂತೆ ಕೋರಿ ಜನಪ್ರತಿನಿಧಿಗಳಿಗೆ ಪತ್ರ ಬರೆಯುವ ಚಳುವಳಿ ನಡೆಯಲಿದೆ. ಯುಗಾದಿಯಿಂದ ರಾಮನವಮಿಯವರೆಗೆ ವಿವಿಧ ದೇವಾಲಯಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗಂಗಾವಳಿ, ಅಘನಾಶಿನಿ ಮತ್ತು ಶಾಲ್ಮಲಾ ನದಿ ತಿರುವು ಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸ್ವರ್ಣವಲ್ಲಿ ಮಠದಿಂದ ವಿವಿಧ ಅಭಿಯಾನ ನಡೆಸಲಾಗುತ್ತಿದೆ. ಈ ಎಲ್ಲಾ ಚಟುವಟಿಕೆಗಳಿಗೆ ಪೂರಕವಾಗಿ `ಭಗೀರಥ’ ಎಂಬ ಜಾಲತಾಣ ನಿರ್ಮಿಸಲಾಗಿದೆ.
`ಆಧ್ಯಾತ್ಮಿಕ ಶಕ್ತಿಯ ಮೂಲಕ ನದಿ ಸಂರಕ್ಷಣೆಯ ಸಂಕಲ್ಪ ಮಾಡುವುದು ಅಭಿಯಾನದ ಮುಖ್ಯ ಉದ್ದೇಶ’ ಎಂದು ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. `ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳು ಹಾಗೂ ಸಂಬoಧಪಟ್ಟ ಸಚಿವರಿಗೆ ಪತ್ರ ಬರೆಯಲಾಗುತ್ತದೆ. ಜನರು ಈ ಕಾರ್ಯಕ್ಕೆ ಕೈ ಜೋಡಿಸಬೇಕು’ ಎಂದವರು ಕರೆ ನೀಡಿದ್ದಾರೆ.