ಹೊನ್ನಾವರದ ಮೂಡ್ಕಣಿ ಹಂಗಾರಗುoಡಿ ಬಳಿ ನಾಯಿ ಕಾಟ ಜೋರಾಗಿದೆ. ಅಲ್ಲಿದ್ದ ನಾಯಿಯೊಂದು ಕಾರಿನ ಅಪಘಾತಕ್ಕೆ ಕಾರಣವಾಗಿದೆ. ಕಾರು ಕಂದಕಕ್ಕೆ ಬಿದ್ದ ಪರಿಣಾಮ ಐದು ಜನ ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದಿದ್ದಾರೆ.
ಚಿತ್ರದುರ್ಗದ ಕೀರ್ತಿರಾಜ್ ಅವರು ಸಾಗರದಿಂದ ಹೊನ್ನಾವರದ ಕಡೆ ಮಾರ್ಚ 6ರ ನಸುಕಿನಲ್ಲಿ ಕಾರು ಓಡಿಸಿಕೊಂಡು ಹೊರಟಿದ್ದರು. ಆ ಕಾರಿನಲ್ಲಿ ಚಿತ್ರದುರ್ಗದ ರಂಗನಾಥ ಗಿರಿಯಪ್ಪ ಅವರ ಕುಟುಂಬ ಸಂಚರಿಸುತ್ತಿತ್ತು. ನಸುಕಿನ 2 ಗಂಟೆ ವೇಳೆಗೆ ಆ ಕಾರು ಹೊನ್ನಾವರದ ಮೂಡ್ಕಣಿ ಹಂಗಾರಗುAಡಿ ತಲುಪಿದ್ದು, ಅಲ್ಲಿ ಕಂದಕಕ್ಕೆ ಬಿದ್ದಿತು. ಕಾರಿಗೆ ಅಡ್ಡಲಾಗಿ ದಿಢೀರ್ ಆಗಿ ನಾಯಿ ಅಡ್ಡ ಬಂದಿದ್ದರಿAದ ಕೀರ್ತಿರಾಜ್ ಅವರು ಕಂಗಾಲಾಗಿದ್ದು, ಕಾರನ್ನು ಅಪಘಾತಕ್ಕೀಡು ಮಾಡಿದರು.
ಈ ಅಪಘಾತದಲ್ಲಿ ರಂಗನಾಥ ಗಿರಿಯಪ್ಪ ಅವರ ಕಾಲು ಮುರಿಯಿತು. ಅವರ ಪತ್ನಿ ಸುಶ್ಮಾ ರಂಗನಾಥ್ ಅವರ ಕೈ ಮುರಿಯಿತು. ಅವರ ಮಗಳು ಯುಕ್ತಾ ರಂಗನಾಥ್ ಅವರಿಗೆ ಕಾಲಿಗೆ ಪೆಟ್ಟಾಯಿತು. ಜೊತೆಗಿದ್ದ ರಾಕೇಶ ಹನುಮಂತಪ್ಪ ಅವರ ಮೂಗಿನಿಂದ ರಕ್ತ ಸುರಿಯಲು ಶುರುವಾಯಿತು. ಜೊತೆಗೆ ಕಾರು ಓಡಿಸುತ್ತಿದ್ದ ಕೀರ್ತಿರಾಜ್ ಅವರ ಕೈ ಮೂಳೆಯೂ ಮುರಿದಿತ್ತು.
ಅಪಘಾತದಲ್ಲಿ ಗಾಯಗೊಂಡ ಎಲ್ಲರೂ ಚಿಕಿತ್ಸೆ ಪಡೆದಿದ್ದಾರೆ. ಅವರೆಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಅಪಘಾತದ ಬಗ್ಗೆ ಚಿತ್ರದುರ್ಗದ ಪುನಿತ್ ಗಿರಿಯಪ್ಪ ಅವರು ಹೊನ್ನಾವರ ಪೊಲೀಸರಿಗೆ ತಿಳಿಸಿದರು. ಅಪಘಾತದಲ್ಲಿ ಕಾರು ಜಖಂ ಆಗಿದ್ದು, ಅಪಘಾತಕ್ಕೆ ಚಾಲಕ ಕೀರ್ತಿರಾಜ್ ಅವರೇ ಕಾರಣ ಎಂದು ಪೊಲೀಸರು ಪ್ರಕರಣ ದಾಖಲಿಸಿದರು.
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’