ಉತ್ತರ ಕನ್ನಡ ಜಿಲ್ಲೆಯ ವಿವಿಧ ಕುಗ್ರಾಮಗಳಲ್ಲಿ 40 ವರ್ಷ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕೃಷ್ಣಾನಂದ ಭಟ್ಟ ಹಾಗೂ `ಜನಪ್ರಿಯ ಶಿಕ್ಷಕಿ’ ಪ್ರಶಸ್ತಿ ಪುರಸ್ಕೃತರಾದ ಅವರ ಜಯಶ್ರೀ ಔಟ್ಟ ಅವರಿಗೆ ಅವರ ಶಿಷ್ಯವರ್ಗ, ಅಭಿಮಾನಿಗಳು, ಸಹೋದ್ಯೋಗಿಗಳು ಹಾಗೂ ಬಂಧುವರ್ಗದವರು ಸೇರಿ ಅಭಿನಂದನಾ ಸಮಾರಂಭ ಆಯೋಜಿಸಿದ್ದಾರೆ. ಮಾರ್ಚ 22ರಂದು ಈ ಸಮಾರಂಭ ನಡೆಯಲಿದೆ.
ಈ ಶಿಕ್ಷಕ ದಂಪತಿ ಎಂಭತ್ತೆರಡರ ಹರೆಯಕ್ಕೆ ಅಡಿಯಿಡುವ ಹಾಗೂ ವೈವಾಹಿಕ ಜೀವನದ ಸುವರ್ಣಮಹೋತ್ಸವ ಸಂದರ್ಭದಲ್ಲಿ ಕುಮಟಾ ತಾಲೂಕು ಬೆತ್ತಗೇರಿ ಸಮೀಪ ಹೊಳೆಗದ್ದೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಸಮಾರಂಭ ನಡೆಯಲಿದ್ದು, ಬೆಳಗ್ಗೆ ಆರಂಭಗೊAಡು ರಾತ್ರಿಯ ಭೋಜನದೊಂದಿಗೆ ಮುಕ್ತಾಯಗೊಳ್ಳುವ ಕಾರ್ಯಕ್ರಮದಲ್ಲಿ ಅಭಿನಂದನ ಗ್ರಂಥ ಬಿಡುಗಡೆ, ಗುರುದಂಪತಿಗೆ, ಸಾಧಕರಿಗೆ ಸನ್ಮಾನ, ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ.
ಸಾಂಸಾರಿಕ ಕಾರಣಗಳಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಕೃಷ್ಣಾನಂದ ಭಟ್ಟರು ಆದರ್ಶ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಗುರುವಾಗಿ ವಿದ್ಯಾದಾನ ಮಾಡಿದ್ದು, ಅವರ ವಿದ್ಯಾರ್ಥಿಗಳು ದೇಶದ ಉದ್ದಗಲದಲ್ಲಲ್ಲದೆ, ವಿದೇಶಗಳಲ್ಲೂ ನೆಲೆಸಿ ಆದರ್ಶ ಜೀವನ ನಡೆಸುತ್ತಿದ್ದಾರೆ. ಜಯಶ್ರೀ ಅವರು ಶಿಕ್ಷಕಿಯಾಗಿ ಬೋಧನಾ ತತ್ಪರತೆಯಿಂದಾಗಿ ಶಿಕ್ಷಣ ಇಲಾಖೆಯ ಜನಪ್ರಿಯ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಿವೃತ್ತಿ ಬಳಿಕ ಭಟ್ಟರು ಶ್ರೀರಾಮಚಂದ್ರಪುರ ಮಠದಲ್ಲಿ ಪ್ರಧಾನ ಗುರಿಕಾರರಾಗಿ, ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಗೋಮಾತೆಯ ಸಾರ್ಥಕ ಜೀವನವನ್ನು ಬಣ್ಣಿಸುವ ಕವಿತೆಗಳನ್ನು ರಚಿಸಿ, ಅವುಗಳನ್ನೊಳಗೊಂಡ ಧ್ವನಿಸುರುಳಿ ‘ಶ್ರೀಗೋಭಕ್ತಿ ಸುಧೆ’ಯನ್ನು ಸನಾತನ ಲೋಕಕ್ಕೆ ಅರ್ಪಿಸಿದ್ದಾರೆ. ಜಯಶ್ರೀ ಅವರು ಶ್ರೀಮಠದಲ್ಲಿ ‘ಮಾತೃಪ್ರಧಾನೆ’ಯಾಗಿ ಸೇವಾನಿರತರಾಗಿದ್ದು, ದಂಪತಿಯು ಶ್ರೀಗಳಿಂದ ‘ಶ್ರೀಗುರು ಸೇವಾತಿಲಕ’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.