ಕುಮಟಾ ಸಂತೆಗುಳಿಯ ಮುನೀರ್ ಸಾಬ್ ಅವರು `ಶಿರಸಿ ಜಾತ್ರೆಗೆ ಹೋಗೋಣ’ ಎಂದು ಮಹಿಳೆಯೊಬ್ಬರನ್ನು ಪುಸಲಾಯಿಸಿದ್ದು, ಜಾತ್ರೆಗೆ ಹೋಗುವ ದಾರಿಯಲ್ಲಿ ಮಹಿಳೆಯ ಮೈ ಮುಟ್ಟಿದ್ದಾರೆ. ಆಘಾತದಕ್ಕೆ ಒಳಗಾದ ಮಹಿಳೆ ಅಸ್ವಸ್ಥರಾಗಿದ್ದು, ಈ ವಿಷಯವನ್ನು ತಂದೆಯ ಬಳಿ ಹೇಳಿದ್ದಾರೆ.
ಕುಮಟಾದ ಸಂತೆಗಳಿಯಲ್ಲಿ ಮನೀರ್ ಅಹ್ಮದ್ ಸಾಬ್ (53) ಅವರು ವಾಸವಾಗಿದ್ದಾರೆ. ಮೀನು ವ್ಯಾಪಾರಿಯಾಗಿರುವ ಅವರು ಮನೆ ಮನೆಗೆ ಹೋಗಿ ಮೀನು ಮಾರಾಟ ಮಾಡುತ್ತಾರೆ. ಅದರಂತೆ, ಕೂಜಳ್ಳಿ ಹಾಗೂ ಸುತ್ತಲಿನ ಪ್ರದೇಶಗಳಿಗೂ ಮುನೀರ್ ಸಾಬ್ ಅವರು ವ್ಯಾಪಾರಕ್ಕಾಗಿ ಹೋಗುತ್ತಾರೆ. ಮೀನು ವ್ಯಾಪಾರದ ಜೊತೆ ಅಲ್ಲಿನ ಮನೆಗಳಲ್ಲಿರುವ ಹೆಣ್ಣು ಮಕ್ಕಳ ಬಗ್ಗೆಯೂ ಮುನೀರ್ ಸಾಬ್ ಸಾಕಷ್ಟು ತಿಳಿದುಕೊಂಡಿದ್ದಾರೆ. ಹೆಣ್ಣು ಮಕ್ಕಳ ಸ್ನೇಹ ಬಯಸುವ ಮುನೀರ್ ಸಾಬ್ ಅವರನ್ನು ಪುಸಲಾಯಿಸುವುದು ಹೊಸ ವಿಷಯವಲ್ಲ.
ಹೀಗಿರುವಾಗ ಕೂಜಳ್ಳಿಯ ಅಬ್ದುಲ್ ಕರೀಂ ಸಾಬ್ ಶೇಖ್ ಅವರ ಮನೆಗೆ ಮೀನು ಮಾರಾಟಕ್ಕೆ ಹೋಗಿದ್ದ ಮುನೀರ್ ಸಾಬ್ ಅವರು ಅಬ್ದುಲ್ ಅವರ ಮಗಳ ಮೇಲೆ ಕಣ್ಣು ಹಾಕಿದ್ದಾರೆ. ಕೂಜಳ್ಳಿಯ ರುಸ್ತುಮಾ ಸಾಬ್ (ಹೆಸರು ಬದಲಿಸಿದೆ) ಅವರ ಹಿಂದೆ ಬಿದ್ದಿದ್ದ ಮುನೀರ್ ಸಾಬ್ ಆಗಾಗ ಅವರನ್ನು ಹಿಂಬಾಲಿಸುತ್ತಿದ್ದು, ಫೆಬ್ರವರಿ 24ರಂದು `ಶಿರಸಿ ಜಾತ್ರೆಗೆ ಹೋಗೋಣ ಬಾ’ ಎಂದು ಕರೆದಿದ್ದಾರೆ. ಅದಕ್ಕೆ ಒಪ್ಪಿದ ರುಸ್ತುಮಾ ಸಾಬ್ ಅವರನ್ನು ರಿಕ್ಷಾದ ಮೂಲಕ ಕರೆದೊಯ್ದಿದ್ದಾರೆ. ಸಂಜೆ ವೇಳೆ ರಿಕ್ಷಾ ಕತಗಾಲದ ಬಳಿ ತಲುಪಿದಾಗ ಮುನೀರ ಸಾಬ್ ತಮ್ಮ ವರಸೆ ಬದಲಿಸಿದ್ದಾರೆ.
ರುಸ್ತುಮಾ ಸಾಬ್ ಅವರ ಸೊಂಟಕ್ಕೆ ಕೈ ಹಾಕಿದ ಮುನೀರ್ ಸಾಬ್ ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಇದರಿಂದ ರುಸ್ತುಮಾ ಸಾಬ್ ಅವರು ಆಘಾತಕ್ಕೆ ಒಳಗಾಗಿದ್ದು, ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಮನೆಗೆ ಬಂದು ಮಂಕಾಗಿದ್ದ ರುಸ್ತುಮಾ ಸಾಬ್ ಅವರನ್ನು ತಂದೆ ಅಬ್ದುಲ್ ಕರೀಂ ವಿಚಾರಿಸಿದಾಗ ನಡೆದ ವಿಷಯಗಳೆಲ್ಲವೂ ಹೊರಬಿದ್ದಿದೆ. ಮಗಳ ಜೊತೆ ಅನುಚಿತವಾಗಿ ವರ್ತಿಸಿದ ಮೀನು ವ್ಯಾಪಾರಿ ಮುನೀರ್ ಸಾಬ್ ವಿರುದ್ಧ ಅಬ್ದುಲ್ ಕರೀಂ ಅವರು ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.