ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಅನಿಲ ಸರಬರಾಜು ಮಾಡುವ ಕಂಪನಿಗಳ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅದಾದ ನಂತರ `ಗೃಹಬಳಕೆ ಅನಿಲದ ದೈನಂದಿನ ಸರಬರಾಜು ಮತ್ತು ವಿತರಣೆಯಲ್ಲಿ ಯಾವುದೇ ಅಡಚಣೆ ಇಲ್ಲ. ಜನರ ಗೊಂದಲ ಹಾಗೂ ಆತಂಕಕ್ಕೆ ಒಳಗಾಗುವುದು ಬೇಡ’ ಎಂದು ಅಧಿಕೃತ ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿಗಳ ಮೂಲಕ ಅನಿಲ ಸರಬರಾಜು ಆಗುತ್ತಿದೆ. ಆ ಮೂರು ಕಂಪನಿ ಅಧಿಕಾರಿಗಳ ಜೊತೆ ಲಕ್ಷ್ಮೀಪ್ರಿಯಾ ಅವರು ವರ್ಚುವಲ್ ಸಭೆ ಮಾಡಿದ್ದಾರೆ. ಎಲ್ಲಾ ಕಂಪನಿಗಳು ಜಿಲ್ಲೆಯ ದೈನಂದಿನ ಬೇಡಿಕೆಗೆ ತಕ್ಕಂತೆ ಗೃಹ ಬಳಕೆಯ ಅನಿಲ ಸರಬರಾಜು ಮಾಡುವಂತೆ ಅವರು ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು `ಗೃಹ ಬಳಕೆಯ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಕಳೆದ ಒಂದು ದಿನ ಮಾತ್ರ ಗ್ಯಾಸ್ ಮುಂಗಡ ಬುಕ್ಕಿಂಗ್‌ನಲ್ಲಿ ತಾಂತ್ರಿಕ ತೊಂದರೆ ಕಂಡುಬAದಿದ್ದು, ಪ್ರಸ್ತುತ ಆ ದೋಷವನ್ನು ಸರಿಪಡಿಸಲಾಗಿದೆ. ಸಾರ್ವಜನಿಕರು ಗೃಹ ಬಳಕೆ ಅನಿಲ ಮುಂಗಡ ಬುಕಿಂಗನ್ನು ಮೊಬೈಲ್ ಮಿಸ್ ಕಾಲ್ ಮೂಲಕ ಮಾಡಬಹುದಾಗಿದ್ದು, ಐ ವಿ ಆರ್ ಎಸ್, ವಾಟ್ಸಾಪ್, ಮೊಬೈಲ್ ಅಪ್ಲಿಕೇಶನ್ ಮತ್ತು ಪಾವತಿ ಅಪ್ಲಿಕೇಶನ್ ವಿಧಾನ ಬಳಸುವುದು ಅನುಕೂಲ’ ಎಂದಿದ್ದಾರೆ. ಅಂಗನವಾಡಿಗಳು, ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಹಾಸ್ಟೆಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದoತೆ ಆದ್ಯತೆಯಲ್ಲಿ ಅನಿಲ ಸರಬರಾಜು ಮಾಡುವಂತೆ ಡೀಸಿ ಸೂಚಿಸಿದ್ದಾರೆ. ವಾಣಿಜ್ಯ ಬಳಕೆಯ ಸಿಲೆಂಡರ್‌ಗಳ ಸರಬರಾಜು ಮತ್ತು ವಿತರಣೆ ಕುರಿತಂತೆ ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವಂತೆಯೂ ಆದೇಶಿಸಿದ್ದಾರೆ.
`ಸಾರ್ವಜನಿಕರು ಸಹ ಅನಿಲ ಪೂರೈಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಸಭೆಯಲ್ಲಿದ್ದರು.