ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಪೆಟ್ರೋಲ್ ಮಾರಾಟವಾಗಿದೆ. ಜನ ಸಾಲಿನಲ್ಲಿ ನಿಂತು ಪೆಟ್ರೋಲ್ ಖರೀದಿಸುತ್ತಿದ್ದಾರೆ. ಭವಿಷ್ಯದಲ್ಲಿ ಪೆಟ್ರೋಲ್ ಸಿಗಲ್ಲ ಎಂಬ ಆತಂಕದ ಹಿನ್ನಲೆ ಅನೇಕರು ಬಾಟಲಿ-ಬ್ಯಾರಲ್ ಮೂಲಕವೂ ಪೆಟ್ರೋಲ್ ಒಯ್ಯುತ್ತಿದ್ದಾರೆ!
ಇರಾನ್ ದೇಶದ ಮೇಲೆ ಅಮೇರಿಕ-ಇಸ್ರೇಲ್ ದಾಳಿಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಅದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಮೇಲೆಯೂ ಬಿದ್ದಿದೆ. ಆ ದೇಶದ ಯುದ್ಧ ಪರಿಸ್ಥಿತಿಯಿಂದ ಪೆಟ್ರೋಲ್ ಅಭಾವ ಎದುರಾಗುವ ಆತಂಕದ ಹಿನ್ನಲೆ ಜನ ಎಲ್ಲಡೆ ತಮ್ಮ ವಾಹನಗಳಿಗೆ `ಟ್ಯಾಂಕ್ ಪುಲ್’ ಮಾಡಿಸುತ್ತಿದ್ದಾರೆ. ದಾಂಡೇಲಿ ಹಾಗೂ ಭಟ್ಕಳದ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲು ಕಾಣಿಸುತ್ತಿದ್ದು, ಈ ದಿನವೂ ಆ ಸಾಲು ಕಡಿಮೆ ಆಗಿಲ್ಲ. ಕಚ್ಚಾ ತೈಲ ಪೂರೈಕೆಯಲ್ಲಿನ ಅಡಚಣೆಗಳ ಬಗ್ಗೆ ಜಾಗತಿಕ ಕಳವಳ ಹಿನ್ನೆಲೆ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಈ ನಡುವೆ `ಭಾರತವು ಪ್ರಸ್ತುತ ಪೆಟ್ರೋಲ್, ಡೀಸೆಲ್ ಮತ್ತು ವಿಮಾನಯಾನ ಟರ್ಬೈನ್ ಇಂಧನ ಸೇರಿದಂತೆ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಕಷ್ಟು ನಿಕ್ಷೇಪಗಳನ್ನು ಹೊಂದಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಹೀಗಾಗಿ ಜನ ಆತಂಕಪಡುವ ಅಗತ್ಯವಿಲ್ಲ. `ಅಲ್ಪಾವಧಿಯಲ್ಲಿ ದೇಶೀಯ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 25 ದಿನಗಳ ಮೌಲ್ಯದ ಕಚ್ಚಾ ತೈಲ ದಾಸ್ತಾನುಗಳನ್ನು ಹೊಂದಿವೆ ಮತ್ತು ಹೆಚ್ಚುವರಿಯಾಗಿ 25 ದಿನಗಳ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯನ್ನು ಹೊಂದಿವೆ’ ಎಂದು ಸರ್ಕಾರಿ ಮೂಲಗಳು ಸ್ಪಷ್ಠಪಡಿಸಿವೆ. ಅದಾಗಿಯೂ, ಎಲ್ಲಾ ಪೆಟ್ರೀಲ್ ಬಂಕುಗಳಲ್ಲಿ ಎಂದಿಗಿAತ ಹೆಚ್ಚಿನ ಜನ ಕಾಣಿಸುತ್ತಿದ್ದು, ಭಾರೀ ಪ್ರಮಾಣದಲ್ಲಿ ವ್ಯಾಪಾರ ನಡೆದಿದೆ. `ಯಾವುದೇ ರೀತಿಯಲ್ಲಿಯೂ ಪೆಟ್ರೋಲ್ ಕೊರತೆ ಇಲ್ಲ’ ಎಂದು ಬಂಕ್ ಮಾಲಕರು ಹೇಳಿದ್ದಾರೆ.