ಅಂಕೋಲಾ ಅಡ್ಲೂರು ಬಳಿಯ ಕೃಷ್ಣಾನಂದ ನಾಯ್ಕ ಅವರು ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಹೋದಾಗ ಡೋಂಗ್ರಿಯ ಮನೋಜ ನಾಯ್ಕ ಅವರು ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಅದಾದ ನಂತರ ಮತ್ತೊಬ್ಬರ ಜೊತೆ ಸೇರಿ ಕೃಷ್ಣಾನಾಂದ ನಾಯ್ಕ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಅಂಕೋಲಾದ ಅಗಸೂರು ಬಳಿಯ ಅಡ್ಲೂರಿನಲ್ಲಿ ಕೃಷ್ಣಾನಂದ ಜೀವನ ನಾಯ್ಕ (18) ಅವರು ವಾಸವಾಗಿದ್ದಾರೆ. ಕೃಷ್ಣನಂದ ನಾಯ್ಕ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಮನೋಜ ನಾಯ್ಕ ಅವರು ಕೃಷ್ಣಾನಂದ ನಾಯ್ಕ ಅವರ ಸಂಬoಧಿಯೇ ಆಗಿದ್ದಾರೆ. ಅದಾಗಿಯೂ ಯುವತಿಯೊಬ್ಬರ ವಿಚಾರವಾಗಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿದೆ. `ನನ್ನ ತಂಗಿ ಹಾಗೂ ಲವ್ವರ್ ವಿಷಯಕ್ಕೆ ನೀ ಬರಬೇಡ’ ಎಂದು ಕೃಷ್ಣಾನಂದ ನಾಯ್ಕ ಅವರು ಮನೋಜ ನಾಯ್ಕ ಅವರಿಗೆ ಎಚ್ಚರಿಕೆ ನೀಡಿದ್ದೇ ಈ ಕಲಹಕ್ಕೆ ಕಾರಣವಾಗಿದೆ.
ಫೆಬ್ರವರಿ 27ರಂದು ಕೃಷ್ಣಾನಂದ ನಾಯ್ಕ ಅವರು ತಮ್ಮ ಪಕ್ಕದಮನೆಯ ಸ್ನೇಹಿತ ಜಗದೀಶ ಗೌಡ ಅವರ ಮನೆಗೆ ಹೋಗಿದ್ದರು. ರಾತ್ರಿ 10.30ಕ್ಕೆ ಅವರು ಅಲ್ಲಿಂದ ಮನೆಗೆ ಮರಳುತ್ತಿದ್ದು, ದಾರಿ ಮದ್ಯೆ ಮೂತ್ರ ವಿಸರ್ಜನೆಗಾಗಿ ನಿಂತಿದ್ದರು. ಆಗ, ಅಲ್ಲಿಗೆ ಬಂದ ಡೋಂಗ್ರಿಯ ಮನೋಜ ನಾಯ್ಕ ಅವರು ಕೃಷ್ಣನಂದ ನಾಯ್ಕ ಅವರ ಕಣ್ಣಿಗೆ ಖಾರದಪುಡಿ ಎರಚಿದರು. ಮನೋಜ ನಾಯ್ಕ ಅವರ ಜೊತೆ ಮತ್ತೊಬ್ಬ ವ್ಯಕ್ತಿಯಿದ್ದು, ಅವರು ಯಾರು ಎಂದು ಕೃಷ್ಣಾನಂದ ನಾಯ್ಕ ಅವರಿಗೆ ಗೊತ್ತಾಗಲಿಲ್ಲ. ಮನೋಜ ನಾಯ್ಕ ಹಾಗೂ ಆ ಮತ್ತೊಬ್ಬ ವ್ಯಕ್ತಿ ಸೇರಿ ಕೃಷ್ಣಾನಂದ ನಾಯ್ಕ ಅವರ ಮೇಲೆ ದಾಳಿ ಮಾಡಿದರು. ಅವರಿಬ್ಬರು ಸೇರಿ ಹಿಗ್ಗಾಮುಗ್ಗ ಥಳಿಸಿದರು.
ಕಣ್ಣಿಗೆ ಖಾರದಪುಡಿ ಬಿದ್ದಿದ್ದರಿಂದ ಕೃಷ್ಣಾನಂದ ನಾಯ್ಕ ಅವರಿಗೆ ಓಡಲು ಆಗಲಿಲ್ಲ. ಅವರಿಬ್ಬರು ದೊಣ್ಣೆಯಿಂದ ಹೊಡೆದರೂ ಅದನ್ನು ಕೃಷ್ಣಾನಂದ ನಾಯ್ಕ ಅವರು ಸಹಿಸಿಕೊಂಡಿದ್ದು, ಕೂಗಾಟ ಕೇಳಿ ಜೀವನ ನಾಯ್ಕ ಅವರು ಅಲ್ಲಿಗೆ ಧಾವಿಸಿದರು. ಕೃಷ್ಣಾನಂದ ನಾಯ್ಕ ಅವರ ತಂದೆ ಆಗಮಿಸಿರುವುದನ್ನು ನೋಡಿ ಅವರಿಬ್ಬರು ಅಲ್ಲಿಂದ ಪರಾರಿಯಾದರು. ನೋವು ಉಂಡಿದ್ದ ಕೃಷ್ಣಾನಂದ ನಾಯ್ಕ ಅವರು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದರು. ಅದಾದ ನಂತರ ತಮ್ಮ ಮೇಲೆ ನಡೆದ ದಾಳಿಯ ಬಗ್ಗೆ ಅವರು ಅಂಕೋಲಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.