ಮನೆ ನಿರ್ಮಾಣ ವಿಷಯಕ್ಕೆ ಸಂಬoಧಿಸಿ ಶಿರಸಿಯ ಮರಾಠಿಕೊಪ್ಪದಲ್ಲಿ ಮಾರಾಮಾರಿ ನಡೆದಿದೆ. ಅಲ್ಲಿ ಮನೆ ನಿರ್ಮಾಣ ಮಾಡುತ್ತಿರುವ ಅಜಯ ಲಾಡನವರ್ ಅವರ ಮೇಲೆ ರವಿ ಗೌಳಿ ಅವರು ಆಕ್ರಮಣ ನಡೆಸಿದ್ದು, ಅಜಯ ಲಾಡನವರ್ ಸಹ ತಮ್ಮ ತಂಡದೊoದಿಗೆ ಪ್ರತಿ ದಾಳಿ ನಡೆಸಿದ್ದಾರೆ.
ಶಿರಸಿಯ ಮರಾಠಿಕೊಪ್ಪದಲ್ಲಿ ವಾಸವಾಗಿರುವ ಗುತ್ತಿಗೆದಾರರಾದ ಅಜಯ ಅರ್ಜುನ ಲಾಡನವರ್ ಹಾಗೂ ರವಿಚಂದ್ರ ಹನುಮಂತ ಗೌಳಿ ಅವರ ನಡುವಿನ ಜಗಳ ತಾರಕ್ಕೇರಿದೆ. `ತಮ್ಮ ಸರ್ವೇ ನಂ 81/1ಅ ಕ್ಷೇತ್ರದಲ್ಲಿ ಮನೆ ನಿರ್ಮಾಣ ಮಾಡುವಾಗ ಅದಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ಅಜಯ ಲಾಡನವರ್ ಅವರು ದೂರಿದ್ದಾರೆ. `ಸರ್ವೇ ನಂ 90/1ರಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ಇದ್ದರೂ ಕೆಲಸ ನಡೆಯುತ್ತಿದೆ’ ಎಂದು ರವಿ ಗೌಳಿ ಅವರು ದೂರಿದ್ದಾರೆ. ಅವರವರು ದೂರಿದ ಪ್ರಕಾರ ಸರ್ವೇ ನಂ ಕ್ಷೇತ್ರ ಬೇರೆ ಬೇರೆ ಆಗಿದ್ದರೂ ಕಟ್ಟಡ ನಿರ್ಮಾಣ ವಿಷಯವಾಗಿ ಅವರಿಬ್ಬರ ನಡುವೆ ಜಟಾಪಟಿ ನಡೆದಿದೆ. ಇದೇ ವಿಷಯವಾಗಿ ಅವರಿಬ್ಬರ ನಡುವೆ ಹೊಡೆದಾಟ ನಡೆದಿದ್ದು, ಆ ಹೊಡೆದಾಟದಲ್ಲಿ ಅವರವರ ಸಹಚರರು ಭಾಗಿಯಾಗಿದ್ದಾರೆ.
ಸದ್ಯ ಮರಾಠಿಕೊಪ್ಪದಲ್ಲಿ ಸದ್ಯ ಅಜಯ ಲಾಡನವರ್ ಅವರು ಕಟ್ಟಡದ ಎರಡನೇ ಸ್ಲಾಬ್ ಪೂರ್ಣಗೊಳಿಸಿದ್ದಾರೆ. `ಆ ಕಟ್ಟಡ ಕಾಮಗಾರಿ ನಡೆಸದಂತೆ ಸೂಚಿಸಲು ತೆರಳಿದಾಗ ತಮ್ಮ ಮೇಲೆ ದಾಳಿ ನಡೆದಿದೆ’ ಎಂದು ರವಿ ಗೌಳಿ ಅವರು ಅಳಲು ತೋಡಿಕೊಂಡಿದ್ದಾರೆ. ಫೆ 27ರಂದು ಈ ಹೊಡೆದಾಟ ನಡೆದಿದ್ದು, ಸದ್ಯ ರವಿ ಗೌಳಿ ಅವರು ಸಹ ಪೊಲೀಸ್ ದೂರು ನೀಡಿದ್ದಾರೆ. ಅಜಯ ಲಾಡನವರ್ ಅವರ ಜೊತೆ ಖಂಡಪ್ಪ ಯಲ್ಲಪ್ಪ ಗೌಳಿ, ಮಧು ಅಜಯ ಲಾಡನವರ್, ರವಿ ವೆಂಕಟೇಶ ನಾಯ್ಕ ಅವರು ಕೈ ಮಾಡಿರುವುದಾಗಿ ದೂರಿದ್ದಾರೆ. ಅದಾದ ನಂತರ `ಫಿಶ್ ಲ್ಯಾಂಡಿನ ರಾಘು ಶೆಟ್ಟಿ ಹಾಗೂ ಸಚೀನ ಗಾಂವ್ಕರ್ ಅವರು ತಮಗೆ ಭಯಪಡಿಸಿದ್ದಾರೆ’ ಎಂದು ರವಿ ಗೌಳಿ ಅವರು ಹೇಳಿದ್ದಾರೆ.
ಅಜಯ ಲಾಡನವರ್ ಅವರು ನೀಡಿದ ದೂರಿನಲ್ಲಿ ರವಿ ಗೌಳಿ ಅವರ ಜೊತೆ ಆನಂದ ಹನುಮಂತ ಗೌಳಿ, ಮನೋಜ ಹನುಮಂತ ಗೌಳಿ ಹಾಗೂ ಸಚಿನ ಕೃಷ್ಣ ಗೌಳಿ ಅವರು ಅಲ್ಲಿಗೆ ಆಗಮಿಸಿ ಗಲಾಟೆ ಮಾಡಿದ ಬಗ್ಗೆ ಆರೋಪಿಸಿದ್ದರು. `ಹೊಡೆದಾಟ ತಪ್ಪಿಸಲು ಬಂದ ಅಜಯ ಲಾಡನವರ್ ಅವರ ಪತ್ನಿ ಮಧುಶ್ರೀ ಅವರ ಮೈ ಮುಟ್ಟಿದ್ದಾರೆ’ ಎಂದು ದೂರಿದ್ದರು. ಈ ಎರಡು ಕಡೆಯವರ ಮಾತು ಆಲಿಸಿದ ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ.