`ಶಾಲೆಗಳಲ್ಲಿ ಮಕ್ಕಳಿಗೆ ಪಾಠದ ಜೊತೆ ಸಂಸ್ಕಾರದ ಬಗ್ಗೆ ಅರಿವು ಮೂಡಿಸಬೇಕು’ ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ಹೇಳಿದ್ದಾರೆ. ಕಾರವಾರದ ಕೋಡಿಭಾಗದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು `ಮಕ್ಕಳು ಅಂಕಗಳಿಕೆಗೆ ಮಾತ್ರ ಸೀಮಿತವಾಗಿರದೇ ಎಲ್ಲಾ ಚಟುವಟಿಕೆಗಳಲ್ಲಿಯೂ ಸಕ್ರೀಯರಾಗಿರಬೇಕು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಶಿಕ್ಷಣದ ಜೊತೆ ಬದುಕಿನ ಮೌಲ್ಯಗಳ ಬಗ್ಗೆ ತಿಳಿ ಹೇಳಬೇಕು’ ಎಂದವರು ಕರೆ ನೀಡಿದರು.
`ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ಈ ರ್ಷದಿಂದ ಐಸಿಎಸ್‌ಸಿ ಪಠ್ಯಕ್ರಮ ಅಳವಡಿಸಿರುವುದು ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ’ ಎಂದವರು ಅಭಿಪ್ರಾಯಪಟ್ಟರು. `ಪ್ರತಿಯೊಬ್ಬರು ಗುರು-ಹಿರಿಯರನ್ನು ಗೌರವಿಸಬೇಕು. ಆಗ ಮಾತ್ರ ಸಮಾಜದಲ್ಲಿಯೂ ಮೌಲ್ಯ ಹೆಚ್ಚಾಗಲಿದೆ’ ಎಂದರು. ಎಲ್ ಕೆ ಜಿ ಮತ್ತು ಯುಕೆಜಿ ವಿಭಾಗದ ವಿದ್ಯಾರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರವನ್ನು ಗಣಪತಿ ಉಳ್ವೇಕರ್ ಅವರು ವಿತರಿಸಿದರು. ಸಂಸ್ಥೆಯ ಅಧ್ಯಕ್ಷ ದೀಪಕ್ ವೈಗಣಕರ್, ಕಾರ್ಯದರ್ಶಿ ವಿ ಜೇ ತಾಮಸೇ ಹಾಗೂ ವಿವೇಕಾನಂದ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಪ್ರಜಕ್ತ ಮಯೇಕರ್, ಪ್ರಾಚಾರ್ಯೆ ನಾಗರತ್ನ ಜೈ ರಂಗನಾಥ ಅವರು ವೇದಿಕೆಯಲ್ಲಿದ್ದರು.
ಸುಶ್ಮಿತಾ ನಾಯಕ ವಾರ್ಷಿಕ ವರದಿ ವಾಚಿಸಿದರು. ವಿನೋದ ಅಲ್ಮೆಡ ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದರು. ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅದಾದ ನಂತರ ನಡೆದ ಮನರಂಜನಾ ಕಾರ್ಯಕ್ರಮಗಳು ಜನರ ಮನಗೆದ್ದವು. ಅಜಿತ್ ಗುನಿಗ ಅವರ ಕಾರ್ಯಕ್ರಮಗಳು ರಂಜಿಸಿದವು.