ಮರದಲ್ಲಿದ್ದ ಹಲಸಿನ ಕಾಯಿ ಕೊಯ್ಯಲು ಹೋಗಿದ್ದ ಪ್ರದೀಪ ನಾಯ್ಕ ಅವರು ಮರದ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿದ್ದಾರೆ. ವಿದ್ಯುತ್ ಆಘಾತದಿಂದ ಸುಟ್ಟು ಗಾಯಗೊಂಡಿದ್ದ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ.
ಸಿದ್ದಾಪುರದ ಬಾಲಿಕೊಪ್ಪದಲ್ಲಿ ಪ್ರದೀಪ ಲಕ್ಷö್ಮಣ ನಾಯ್ಕ ಅವರು ವಾಸವಾಗಿದ್ದರು. 31 ವರ್ಷದ ಅವರು ವೆಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮಾರ್ಚ 19ರಂದು ಅವರು ತಮ್ಮ ಹೊಲದ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ಬರುವಾಗ ಹೊಲದ ಅಂಚಿನಲ್ಲಿದ್ದ ಹಲಸಿನ ಮರ ನೋಡಿದರು. ಆ ಮರದಲ್ಲಿ ಬೆಳೆದಿದ್ದ ಹಲಸಿನ ಫಲ ಕೊಯ್ಯುವುದಕ್ಕಾಗಿ ಅವರು ಮರ ಏರಿದರು.
ಆದರೆ, ಆ ಹಲಸಿನ ಮರದ ಅಂಚಿಗೆ ವಿದ್ಯುತ್ ತಂತಿ ಹಾದು ಹೋಗಿದ್ದು, ಅದನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ. ಹಲಸಿನ ಕಾಯಿ ಕೊಯ್ಯುವಾಗ ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ಅವರ ದೇಹ ಸ್ಪರ್ಶಿಸಿತು. ಈ ವೇಳೆ ವಿದ್ಯುತ್ ಪ್ರವಹಿಸಿ ಅವರು ಮರದಿಂದ ನೆಲಕ್ಕೆ ಬಿದ್ದರು. ವಿದ್ಯುತ್ ಆಘಾತ ಹಾಗೂ ನೆಲಕ್ಕೆ ಬಿದ್ದ ಪರಿಣಾಮ ಅವರ ಹಣೆ ಹಾಗೂ ಕೈಗೆ ಗಾಯವಾದವು.
ಸುಟ್ಟ ಗಾಯದಿಂದ ನರಳುತ್ತಿದ್ದ ಪ್ರದೀಪ ನಾಯ್ಕ ಅವರನ್ನು ಕುಟುಂಬದವರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಸಾಕಷ್ಟು ಶ್ರಮಿಸಿದರೂ ಅಲ್ಲಿ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ಮಗನ ಸಾವಿನ ಬಗ್ಗೆ ಕರಿಯಮ್ಮ ನಾಯ್ಕ ಅವರು ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ಅಪಾಯಕಾರಿ ಸ್ಥಳಗಳಿಂದ ದೂರವಿರಿ’