ಶಿರಸಿ ಮುಸ್ಲಿಂ ಗಲ್ಲಿಯ ರಹನಾ ಬುಡ್ನನವರ್ ಅವರ ಮೇಲೆ ಅವರ ಪತಿ ಇಸಾಕ್ ಅಹಮದ್ ಹುಸೇನ್ ಸಾಬ್ ಅವರು ಹಲ್ಲೆ ಮಾಡಿದ್ದಾರೆ. ಇದರಿಂದ ರಹನಾ ಬುಡ್ನನವರ್ ಅವರು ಆಸ್ಪತ್ರೆ ಸೇರಿದ್ದಾರೆ.
ರಹನಾ ಇಸಾಕ್ ಅಹಮದ್ ಬುಡ್ನನವರ್ (46) ಅವರು 2004ರಲ್ಲಿ ಇಸಾಕ್ ಅಹಮದ್ ಹುಸೇನ್ ಸಾಬ್ ಅವರನ್ನು ಮದುವೆ ಆಗಿದ್ದರು. ಮದುವೆ ಆದ ಕೆಲ ವರ್ಷಗಳ ಕಾಲ ಅವರಿಬ್ಬರು ಅನ್ಯೋನ್ಯವಾಗಿ ಜೀವಿಸುತ್ತಿದ್ದರು. ಅವರಿಬ್ಬರಿಗೂ ಮೂವರು ಮಕ್ಕಳು ಆಗಿದ್ದರು. ಹೀಗಿರುವಾಗ ಇಸಾಕ್ ಅಹಮದ್ ಅವರು ಏಕಾಏಕಿ ವ್ಯಸನಕ್ಕೆ ಒಳಗಾದರು. ಕುಡಿತದ ಚಟಕ್ಕೆ ದಾಸರಾದ ಅವರು ಪತ್ನಿ ಮೇಲೆ ಸಂಶಯ ಶುರು ಮಾಡಿದರು. ನಿತ್ಯವೂ ಕಂಠಪೂರ್ತಿ ಸರಾಯಿ ಕುಡಿದು ಆಗಮಿಸುವ ಇಸಾಕ್ ಅಹಮದ್ ಅವರು ಪತ್ನಿಗೆ ಹೊಡೆಯುತ್ತಿದ್ದರು. ಈ ಕಾಟ ಸಹಿಸಲಾಗದೇ ರಹನಾ ಬುಡ್ನನವರ್ ಅವರು ಪ್ರತ್ಯೇಕ ಮನೆ ಮಾಡಿದರು.
ತಮ್ಮ ಮೂರು ಮಕ್ಕಳ ಜೊತೆ ರಹನಾ ಬುಡ್ನನವರ್ ಅವರು ಬೇರೆ ಕಡೆ ವಾಸಿಸಲು ಶುರು ಮಾಡಿದರು. ಅದಾಗಿಯೂ, ಇಸಾಕ್ ಅಹಮದ್ ಅವರ ಕಾಟ ತಪ್ಪಲಿಲ್ಲ. ತಾವು ಅನುಭವಿಸುವ ಹಿಂಸೆಯ ಬಗ್ಗೆ ರಹನಾ ಬುಡ್ನನವರ್ ಅವರು ಜಮಾತ್ ಬಳಿ ಹೇಳಿದರು. ಆದರೆ, ಅದರಿಂದಲೂ ಯಾವುದೇ ಪ್ರಯೋಜನ ಆಗಲಿಲ್ಲ. ಹೀಗಾಗಿ ವಿಚ್ಚೇದನ ಕೋರಿ ಅವರು ನ್ಯಾಯಾಲಯದ ಮೊರೆ ಹೋದರೂ ಸಹ ಬಾಡಿಗೆ ಮನೆ ಬಳಿ ಇಸಾಕ್ ಅಹಮದ್ ಆಗಮಿಸಿ ಗಲಾಟೆ ಮಾಡುವುದು ತಪ್ಪಲಿಲ್ಲ.
ಈ ಎಲ್ಲದರ ನಡುವೆ ಮಾರ್ಚ 27ರಂದು ಕರಿಗುಂಡಿ ರಸ್ತೆ ಮೂಲಕ ಮುಸ್ಲಿಂ ಗಲ್ಲಿ ಕಡೆ ರಹನಾ ಅವರು ನಡೆದು ಹೋಗುತ್ತಿದ್ದರು. ಇಸಾಕ್ ಅಹಮದ್ ಅವರು ಬೈಕಿನಲ್ಲಿ ಅವರನ್ನು ಹಿಂಬಾಲಿಸಿ ಬಂದರು. ರಸ್ತೆ ಮದ್ಯೆಯೇ ಜಗಳ ಮಾಡಿ ಒಂದು ಏಟು ಹಾಕಿದರು. ರಹನಾ ಅವರು ಈ ವೇಳೆ ಇಸಾಕ್ ಅವರಿಂದ ತಪ್ಪಿಸಿಕೊಂಡು ತಮ್ಮ ಮನೆಗೆ ಆಗಮಿಸಿದ್ದು, ಅಲ್ಲಿಯೂ ಇಸಾಕ್ ಅಹಮದ್ ಅವರು ಆಗಮಿಸಿ ಹಲ್ಲೆ ಮಾಡಿದರು. ಈ ವೇಳೆ ಅಲ್ಲಿದ್ದ ತಮ್ಮ ಎರಡನೇ ಮಗಳ ಮೇಲಯೂ ಕೈ ಮಾಡಿ, ಕೆಟ್ಟದಾಗಿ ಬೈದರು. ಈ ಅನ್ಯಾಯ ಸಹಿಸದ ರಹನಾ ಬುಡ್ನನ್ನವರ್ ಅವರು ನ್ಯಾಯ ಕೋರಿ ಪೊಲೀಸರ ಮೊರೆ ಹೋದರು. ಶಿರಸಿ ಮಾರುಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದರು.