ಕಾರವಾರದ ಹಣಕೋಣ ಗ್ರಾಮ ಪುರೋಹಿತರಾಗಿದ್ದ ಪ್ರಭಾಕರ ಜೋಶಿ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿರಂತರ ಚಿಕಿತ್ಸೆಗೆ ಒಳಗಾಗಿದ್ದು, ಕೊನೆಗೆ ಹೃದಯಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.
ಗೋಕರ್ಣ ಮೂಲದ ಪ್ರಭಾಕರ ಜೋಶಿ ಅವರು ಬಾಲ್ಯದಲ್ಲಿಯೇ ಹಣಕೋಣಕ್ಕೆ ಆಗಮಿಸಿದ್ದರು. ಇಲ್ಲಿಯೇ ದೇವಿ ಆರಾಧನೆಯಲ್ಲಿ ತೊಡಗಿದ್ದ ಅವರು ಊರಿನ ಪುರೋಹಿತರಾಗಿ ಜನಮನ್ನಣೆಗಳಿಸಿದ್ದರು. ಜ್ಯೋತಿಷ್ಯದಲ್ಲಿಯೂ ಅಪಾರ ಪರಿಣಿತಿಪಡೆದಿದ್ದರು. ಅಪಾರವಾದ ಅಧ್ಯಯನ, ಸ್ನೇಹಮಯ ವ್ಯಕ್ತಿತ್ವ, ಸರ್ವರನ್ನು ಗೌರವಿಸುವ ಸ್ವಭಾವದಿಂದಾಗಿ ಅವರು ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಶಿಷ್ಯ ವರ್ಗದಲ್ಲಿ ಯಾರಿಗೆ ಕಷ್ಟ ಎದುರಾದರೂ ಅವರ ನೋವಿಗೆ ಪ್ರಭಾಕರ ಜೋಶಿ ಅವರು ಸ್ಪಂದಿಸುತ್ತಿದ್ದರು.
ದೇವಾಲಯಗಳಲ್ಲಿ ಶಿಸ್ತಿನ ಪೂಜೆ, ದೇವರ ಆರಾಧನೆಯಲ್ಲಿ ಅತ್ಯಂತ ಭಕ್ತಿಯಿಂದ ಪ್ರಭಾಕರ ಜೋಶಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಅತಿಥಿ ಸತ್ಕಾರ, ದಾನ-ಧರ್ಮಗಳಲ್ಲಿಯೂ ಪ್ರಭಾಕರ ಜೋಶಿ ಅವರು ಮುಂಚೂಣಿಯಲ್ಲಿದ್ದರು. ತಮ್ಮ ಮಕ್ಕಳಿಗೂ ಸಹ ಅದೇ ಸಂಸ್ಕಾರ ಕಲಿಸಿದ್ದರು. ಹೀಗಿರುವಾಗ ವರ್ಷದ ಹಿಂದೆ ಪ್ರಭಾಕರ ಜೋಶಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆ ನಂತರ ಅವರು ಚೇತರಿಸಿಕೊಳ್ಳುತ್ತಿದ್ದು, ತಮ್ಮ ನೋವಿನಲ್ಲಿಯೂ ಅವರು ಬೇರೆಯವರ ಸಮಸ್ಯೆಗೆ ಸ್ಪಂದಿಸುತ್ತಿದ್ದರು.
ಎರಡು ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾದ ಪ್ರಭಾಕರ ಜೋಶಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಿಕೊಳ್ಳಲು ಆಗಲಿಲ್ಲ. ಪ್ರಭಾಕರ ಜೋಶಿ ಅವರು ಒಬ್ಬರು ಪುತ್ರಿ, ಇಬ್ಬರು ಪುತ್ರರ ಜೊತೆ ಅಪಾರ ಪ್ರಮಾಣದ ಶಿಷ್ಯ ವರ್ಗದವರನ್ನು ಅಗಲಿದ್ದಾರೆ.