ಕಾರವಾರದ ನೌಕಾನೆಲೆ ಒಳಗೆ ಅಪರಿಚಿತ ಕಾರೊಂದು ನುಗ್ಗಿದೆ. ಆ ಕಾರು ಅತಿ ವೇಗವಾಗಿ ಚಲಿಸಿದ್ದು, ಸ್ಕೂಟರಿಗೆ ಡಿಕ್ಕಿ ಹೊಡೆದಿದೆ.
ಅಪರಿಚಿತ ಕಾರು ಗುದ್ದಿದ ಪರಿಣಾಮ ಮಾಜಿ ಸೈನಿಕರೊಬ್ಬರಿಗೆ ಗಾಯವಾಗಿದೆ. ಮಾಜಿ ಸೈನಿಕ ದಿನೇಶ ರಾಮಚಂದ್ರ ಪೈ ಅವರು ಈ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ನೌಕಾನೆಲೆ ಒಳಗೆ ಪ್ರವೇಶಿಸಿದ ಆ ಅಪರಿಚಿತ ಕಾರಿನ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕಾರವಾರದ ಕಡವಾಡದ ಶ್ರೀ ವೆಂಕಟ್ರಮಣ ದೇವಸ್ಥಾನ ಸಮೀಪ ದಿನೇಶ ಪೈ ಅವರು ವಾಸವಾಗಿದ್ದರು. ಅವರು ಅರಗಾದ ನೌಕಾನೆಲೆ ಒಳಗಿನ ಮಿಲಿಟರಿ ಕ್ಯಾಂಟೀನ್‌ಗೆ ಸಾಮಾನು ತರಲು ತೆರಳಿದ್ದರು. ಶನಿವಾರ ನೌಕಾನೆಲೆ ಒಳಗೆ ಸ್ಕೂಟಿಯಲ್ಲಿ ಹೋಗಿದ್ದ ಅವರಿಗೆ ಅಪರಿಚಿತ ಕಾರು ಗುದ್ದಿತು. ಹಿಂದಿನಿoದ ಕಾರು ಗುದ್ದಿದ ರಭಸಕ್ಕೆ ದಿನೇಶ ಪೈ ಅವರು ನೆಲಕ್ಕೆ ಅಪ್ಪಳಿಸಿದ್ದು, ಅವರ ಕೈ-ಕಾಲಿಗೆ ಗಾಯವಾಯಿತು.
ಅಪಘಾತದ ನಂತರ ಆ ಕಾರು ಚಾಲಕ ದಿನೇಶ ಪೈ ಅವರನ್ನು ನೌಕಾನೆಲೆಯ ಎಂ ಐ ರೂಮಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಅದಾದ ನಂತರ ಆ ಚಾಲಕ ಅಲ್ಲಿಂದ ಪರಾರಿಯಾಗಿದ್ದು, ದಿನೇಶ ಪೈ ಅವರನ್ನು ಕಾರವಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ದಿನೇಶ ಪೈ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರು ಹಾಗೂ ಚಾಲಕನ ವಿವರ ಇನ್ನೂ ಪತ್ತೆಯಾಗಿಲ್ಲ.
ಅಪಘಾತಪಡಿಸಿದ ಕಾರು ಚಾಲಕನ ಶೋಧಕ್ಕಾಗಿ ದಿನೇಶ ಪೈ ಅವರ ಪತ್ನಿ ಶೋಭಾಂಗಿ ಪೈ ಅವರು ಪೊಲೀಸ್ ದೂರು ನೀಡಿದ್ದಾರೆ. ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.