ಭಟ್ಕಳದ ವ್ಯಾಪಾರಿ ಗತಫಾನ್ ಅಹ್ಮದ್ ಅವರು ತಾವು ಖರೀದಿಸಿದ್ದ ಐಫೋನ್’ನ್ನು ಮಹಮದ್ ಅಶೀಲ್ ಅವರಿಗೆ ಮಾರಾಟ ಮಾಡಿದ್ದಾರೆ. ಆದರೆ, ಮಾರಾಟ ಮಾಡುವ ಮುನ್ನ ಅದರಲ್ಲಿದ್ದ ಫೋಟೋ-ವಿಡಿಯೋ ಡಿಲಿಟ್ ಮಾಡಿಲ್ಲ. ಹೀಗಾಗಿ ಗತಫಾನ್ ಅಹ್ಮದ್ ಅವರ ಪತ್ನಿಯ ಖಾಸಗಿ ಫೋಟೋ-ವಿಡಿಯೋಗಳು ಐಫೋನ್ ಖರೀದಿಸಿದವರಿಗೆ ಸಿಕ್ಕಿದೆ!
ಭಟ್ಕಳ ಬಂದರು ರಸ್ತೆಯ ಕೋಕ್ತಿನಗರದಲ್ಲಿ ಗತಫಾನ್ ಅಹ್ಮದ್ ಜಾಫರ್ ಸಯ್ಯದ್ ಮೊಹಿದ್ಧೀನ್ (23) ಅವರು ವಾಸವಾಗಿದ್ದಾರೆ. ವ್ಯಾಪಾರ-ವ್ಯವಹಾರ ಮಾಡಿಕೊಂಡು ಅವರು ಜೀವನ ಕಟ್ಟಿಕೊಂಡಿದ್ದಾರೆ. 2025ರ ಮೇ 7ರಂದು ಅವರು ಮೊಬೈಲ್ ಖರೀದಿಗೆ ಯೋಚಿಸಿದ್ದು, ಇದಕ್ಕಾಗಿ ಸಂಗೀತಾ ಮೊಬೈಲಿಗೆ ಭೇಟಿ ನೀಡಿದ್ದಾರೆ. ಅಲ್ಲಿ 75 ಸಾವಿರ ರೂ ಮೌಲ್ಯದ ಐಫೋನ್ – 16 ಅವರನ್ನು ಆಕರ್ಶಿಸಿದೆ. ಆದರೆ, 75 ಸಾವಿರ ರೂ ಹಣವಿಲ್ಲದ ಕಾರಣ ಆ ಫೋನ್ ಖರೀದಿಗಾಗಿ ಗತಫಾನ್ ಅಹ್ಮದ್ ಅವರು ಸಾಲ ಮಡಿದ್ದರೆ. 15 ಸಾವಿರ ರೂ ಪಾವತಿಸಿ ಉಳಿದ 59 ಸಾವಿರ ರೂಪಾಯಿಯನ್ನು ಕಂತಿನ ಮೂಲಕ ಪಾವತಿಸುವ ಭರವಸೆ ನೀಡಿ ಆ ಫೋನ್ ಖರೀದಿಸಿದ್ದಾರೆ.
ಹೊಸದಾಗಿ ಐಫೋನ್ ಖರೀದಿಸಿದ ಖುಷಿಯಲ್ಲಿದ್ದ ಗತಫಾನ್ ಅಹ್ಮದ್ ಅವರು ಆ ಫೋನಿನಲ್ಲಿ ಅನೇಕ ಫೋಟೋ-ವಿಡಿಯೋಗಳನ್ನು ಮಾಡಿದ್ದಾರೆ. ತಮ್ಮ ಪತ್ನಿಯ ಖಾಸಗಿ ವಿಡಿಯೋಗಳನ್ನು ಸಹ ಅದರಲ್ಲಿ ಸೆರೆಹಿಡಿದಿದ್ದಾರೆ. ಅದಾದ ನಂತರ ಅವರು ಸಹಜವಾಗಿ ಆ ಫೋನ್ ಬಳಸುತ್ತಿದ್ದು, ನಾಲ್ಕು ತಿಂಗಳ ಹಿಂದೆ ಆ ಫೋನ್ ಮೇಲೆ ಭಟ್ಕಳ ಜಾಲಿ ರಸ್ತೆಯ ಆಜಾದ್ ನಗರದ ಮಹಮದ್ ಅಶೀಲ್ ಮಹಮದ್ ಶಕೀಲ್ ರುಕ್ನುದ್ದೀನ್ ಅವರು ಕಣ್ಣು ಹಾಕಿದ್ದಾರೆ. `ಆ ಫೋನ್ ತನಗೆ ಕೊಡು’ ಎಂದು ಮಹಮದ್ ಅಶೀಲ್ ಅವರು ದುಂಬಾಲು ಬಿದ್ದಿದ್ದಾರೆ. ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಯ ಮಾತುಕಥೆಯನ್ನು ನಡೆಸಿದ್ದು, `ನಂತರ ಹಣ ಕೊಡುವೆ’ ಎಂದು ತಿಳಿಸಿ ಫೋನ್‌ಪಡೆದಿದ್ದಾರೆ.
ಆದರೆ, ಎಷ್ಟು ದಿನ ಕಳೆದರೂ ಮಹಮದ್ ಅಶೀಲ್ ಅವರು ಐಫೋನ್ ಖರೀದಿಸಿದ ಹಣವನ್ನು ಗತಫಾನ್ ಅಹ್ಮದ್ ಅವರಿಗೆ ಪಾವತಿಸಿಲ್ಲ. ಸಾಕಷ್ಟು ಬಾರಿ ಹಣ ಕೇಳಿದರೂ `ನಂತರ ಕೊಡುವೆ’ ಎಂದು ಉತ್ತರಿಸುತ್ತಲೇ ಮಹಮದ್ ಅಶೀಲ್ ಅವರು ಕಾಲ ಕಳೆದಿದ್ದಾರೆ. ಈ ಎಲ್ಲದರ ನಡುವೆ ಫೆ 26ರಂದು ಮಹಮದ್ ಅಶೀಲ್ ದೇಶ ಬಿಟ್ಟು ಹೋಗಿದ್ದಾರೆ. ಮಹಮದ್ ಅಶೀಲ್ ಅವರು ದುಬೈಗೆ ಹೋದ ವಿಷಯ ಅರಿತ ಗತಫಾನ್ ಅಹ್ಮದ್ ಅವರು `ಈಗಾದರೂ ದುಡ್ಡು ಕೊಡು’ ಎಂದು ದುಂಬಾಲು ಬಿದ್ದಿದ್ದಾರೆ. ಅದರಿಂದ ಸಿಟ್ಟಾದ ಮಹಮದ್ ಅಶೀಲ್ `ಹಣ ಕೊಡುವುದಿಲ್ಲ’ ಎಂದಿದ್ದಾರೆ. `ಮತ್ತೆ ಮತ್ತೆ ಹಣ ಕೇಳಿದರೆ ಆ ಫೋನಿನಲ್ಲಿರುವ ಪತ್ನಿಯ ಖಾಸಗಿ ವಿಡಿಯೋ ವೈರಲ್ ಮಾಡುವೆ’ ಎಂದು ಬೆದರಿಸಿದ್ದಾರೆ.
ಆಗಲೇ ಗತಫಾನ್ ಅಹ್ಮದ್ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ಮೊಬೈಲ್ ಮಾರಾಟ ಮಾಡುವಾಗ ಹಳೆಯ ಡಾಟಾ ಡಿಲಿಟ್ ಮಾಡದೇ ನೀಡದನ್ನು ಅರಿತು ಗತಫಾನ್ ಅಹ್ಮದ್ ಅವರು ಕಂಗಾಲಾಗಿದ್ದಾರೆ. ಹಣವನ್ನು ಕೊಡದೇ, ಖಾಸಗಿ ಫೋಟೋ-ವಿಡಿಯೋ ವೈರಲ್ ಮಾಡುವುದಾಗಿ ವಿದೇಶದಿಂದ ಬೆದರಿಸಿದ ಮಹಮದ್ ಅಶೀಲ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಚಿಂತನೆ ನಡೆಸಿದ್ದಾರೆ. ನಡೆದ ಘಟನಾವಳಿಗಳ ಬಗ್ಗೆ ಗತಫಾನ್ ಅಹ್ಮದ್ ಅವರು ಭಟ್ಕಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.