ಮಹಿಳಾ ಸ್ವಸಹಾಯ ಸಂಘ ರಚಿಸಿ ಅವುಗಳಿಗೆ ಸಾಲ ಒದಗಿಸಿದ್ದ ನಾಗರಾಜ ಕಾಳೇರ್ ಅವರು ಸಾಲ ಮರು ಪಾವತಿ ಹಣವನ್ನು ಸ್ವಂತಕ್ಕೆ ಬಳಸಿದ್ದಾರೆ. ಶಿರಸಿ ಸುತ್ತಮುತ್ತಲು 33 ಸಂಘಗಳಿಗೆ ಫೈನಾನ್ಸ್ ಕಂಪನಿ ಮೂಲಕ ಸಾಲ ನೀಡಿ ಸಾಲದ ಕಂತು ದುರುಪಯೋಗ ಮಾಡಿದ್ದಾರೆ.
ಹಾವೇರಿಯ ಹಾನಗಲ್ಲಿನ ನಾಗರಾಜ ನಿಂಗಪ್ಪ ಕಾಳೇರ್ ಅವರು ಶಿರಸಿಯ ಭಾರತ ಫೈನಾನ್ಸ್’ನ ಬ್ರಾಂಚ್ ಕ್ರೆಡಿಟ್ ಮ್ಯಾನೇಜರ್ ಆಗಿದ್ದರು. ಅವರು ಶಿರಸಿ ಹಾಗೂ ಸುತ್ತಲಿನ ಪ್ರದೇಶದಲ್ಲಿ 20-25 ಮಹಿಳೆಯರನ್ನು ಒಟ್ಟುಗೂಡಿಸಿ ಸಂಘ ಕಟ್ಟಿದ್ದರು. ಒಟ್ಟು 33 ಸಂಘ ರಚಿಸಿ ಆ ಸಂಘದ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಿದ್ದರು. ಸ್ವಾವಲಂಬಿ ಜೀವನ ನಡೆಸುವುದಕ್ಕಾಗಿ ಅವರು ಸಾಲ ನೀಡಿದ್ದು, ಪ್ರತಿ ವಾರವೂ ಅವರು ಮಹಿಳೆಯರಿಂದ ಸಾಲದ ಕಂತು ವಸೂಲಿ ಮಾಡುತ್ತಿದ್ದರು.
ಆದರೆ, ವಸೂಲಿ ಮಾಡಲಾದ ಸಾಲದ ಕಂತನ್ನು ಅವರು ಕಂಪನಿಗೆ ಪಾವತಿ ಮಾಡುತ್ತಿರಲಿಲ್ಲ. ಮಹಿಳೆಯರಿಗೆ ಸಾಲ ಮರು ಪಾವತಿ ರಸೀದಿ ನೀಡಿದರೂ ಕಂಪನಿಗೆ ಮಾತ್ರ ಆ ಹಣ ಸೇರುತ್ತಿರಲಿಲ್ಲ. ಭಾರತ ಫೈನಾನಸ್ಸಿಯಲ್ ಲಿಮಿಟೆಡ್’ನ ಡಿವಿಜನಲ್ ಮ್ಯಾನೇಜರ್ ಶಂಕರಗೌಡ ನಾಗಪ್ಪ ಹಿತ್ತಲಮನಿ ಅವರು ವಿಚಾರಣೆ ನಡೆಸಿದಾಗ ಈ ವಿಷಯ ಗಮನಕ್ಕೆ ಬಂದಿತು. ಹೀಗಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹಣ ದುರ್ಬಳಕೆ ಆರೋಪದ ಅಡಿ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.