ಸೊಸೈಟಿಯಲ್ಲಿ ಮಾಡಿದ ಸಾಲ ತೀರಿಸಲಾಗದೇ ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ ರೈತನ ಮನೆಗೆ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿದ್ದಾರೆ. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಸಂತ್ರಸ್ತರಿಗೆ ಸಾಂತ್ವಾನ ಹೇಳಿದ್ದು, ಆರ್ಥಿಕ ನೆರವು ನೀಡಿದ್ದಾರೆ.
`ಬೆಳೆ ಹಾನಿ ಕಾರಣಕ್ಕಾಗಿ ರೈತ ಆತ್ಮಹತ್ಯೆಗೆ ಶರಣಾಗಿರುವುದು ನೋವು ತಂದಿದೆ. ರೈತನ ಆತ್ಮಹತ್ಯೆ ಪ್ರಕರಣ ರಾಜ್ಯದ ಕೃಷಿ ಪರಿಸ್ಥಿತಿ ತೋರಿಸುತ್ತಿದ್ದು, ರಾಜ್ಯದ ರೈತರು ಬದುಕಿಗಾಗಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಕೃಷಿಯಲ್ಲಿನ ವೆಚ್ಚ, ಬೆಳೆಗೆ ತಕ್ಕ ಬೆಲೆ ಸಿಗದಿರುವಿಕೆ, ಬೆಳೆ ವಿಮೆ ಬಾರದಿರುವಿಕೆ ರೈತನ ಸಾವಿಗೆ ಕಾರಣ. ಎಷ್ಟೇ ಕಷ್ಟ ಬಂದರೂ ರೈತರು ಆತ್ಮಹತ್ಯೆಗೆ ಶರಣಾಗಬಾರದು’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದರು.
`ರೈತನ ಆತ್ಮಹತ್ಯೆ ಒಂದು ಕುಟುಂಬದ ನೋವಲ್ಲ. ಅದು ಸರ್ಕಾರದ ಕೃಷಿ ನೀತಿ ವೈಫಲ್ಯದ ಎಚ್ಚರಿಕೆಯ ಸಂಕೇತ’ ಎಂದವರು ಪ್ರತಿಪಾದಿಸಿದರು. ರೈತ ಆತ್ಮಹತ್ಯೆ ಮಾಡಿಕೊಂಡರೂ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಸರ್ಕಾರ ಮೃತನ ಕುಟುಂಬಕ್ಕೆ ಯೋಗ್ಯ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. `ಈ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮೃತ ರೈತನ ಎಲ್ಲಾ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಸಬೇಕು. ರೈತರಿಗೆ ತಕ್ಷಣ ಆರ್ಥಿಕ ನೆರವು ಮತ್ತು ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ಒದಗಿಸಬೇಕು. ರೈತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಸರ್ಕಾರ ವಿಫಲವಾದರೆ ಭಾರತೀಯ ಜನತಾ ಪಕ್ಷ ರೈತರ ಪರವಾಗಿ ರಾಜ್ಯದ ಎಲ್ಲಡೆ ಹೋರಾಟ ಶುರು ಮಾಡಲಿದ್ದೇವೆ’ ಎಂದು ಎಚ್ಚರಿಸಿದರು.
ಈ ವೇಳೆ ಬಿಜೆಪಿ ಪ್ರಮುಖರಾದ ಎಲ್.ಟಿ.ಪಾಟೀಲ್, ಅಶೋಕ ಚೆಲುವಾದಿ, ಮಂಜುನಾಥ ಪಾಟೀಲ್, ಮಹೇಶ ಹೊಸಕೊಪ್ಪ, ರಮೇಶ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.