ಶಿರಸಿ ಮಂಜುಗುಣಿಯ ವೆಂಕಟರಮಣ ದೇವರ ಅಧ್ಯಕ್ಷತೆಯಲ್ಲಿ ಭಾನುವಾರ ಸಭೆ ನಡೆದಿದ್ದು, ಹೈಕೋರ್ಟ ನ್ಯಾಯಾಧೀಶ ಶಂಕರ ಪಂಡಿತ್ ಅವರು ಮಂಜಗುಣಿ ಕ್ಷೇತ್ರಕ್ಕೆ ತಲೆಭಾಗಿ ನಮಸ್ಕರಿಸಿದ್ದಾರೆ. `ನಮ್ಮ ಪೂರ್ವಿಕರು ಸ್ಥಾಪಿಸಿದ ದೇಗುಲವನ್ನು ನಾವು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು. ಅದು ನಮ್ಮ-ನಿಮ್ಮೇಲ್ಲರ ಜವಾಬ್ದಾರಿ’ ಎಂದು ಅವರು ಈ ವೇಳೆ ಹೇಳಿದ್ದಾರೆ.
ಭಾನುವಾರ ಶಿರಸಿಯ ಮಂಜಗುಣಿ ಕ್ಷೇತ್ರಕ್ಕೆ ಆಗಮಿಸಿದ್ದ ಅವರು `ದೇವರ ಮುಂದೆ ಎಲ್ಲರೂ ಭಕ್ತಿಯಿಂದ ಎಲ್ಲರೂ ತಲೆ ಬಾಗಬೇಕು’ ಎಂದು ಕರೆ ನೀಡಿದ್ದಾರೆ. ಜೊತೆಗೆ ಮಂಜುಗುಣಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡ ಕಾಮಗಾರಿಗಳ ಸಮರ್ಪಣೆ ಕಾರ್ಯಕ್ರಮದ ಅವರು ದಾನಿಗಳಿಗೆ ಸನ್ಮಾನಿಸಿದ್ದಾರೆ. `ದೇವಾಲಯವನ್ನು ಸಂರಕ್ಷಿಸುವವರನ್ನು ದೇವರು ಸಂರಕ್ಷಿಸುತ್ತಾರೆ’ ಎಂದವರು ಹೇಳಿದ್ದಾರೆ. `ದೇವಸ್ಥಾನಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ನಮ್ಮ ಪೂರ್ವಿಕರು ಪ್ರಕೃತಿ ಆರಾಧಕರು ಆಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಅವರ ಕೊಡುಗೆಯೂ ಅಪಾರ’ ಎಂದವರು ಸ್ಮರಿಸಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ಟ ಮಂಜುಗುಣಿ ಅವರು ಮಾತನಾಡಿ `ಗುರುವನ್ನು ದೇವರೆಂದು ಕರೆದರು. ದೇವರನ್ನು ಗುರುವೆಂದು ಭಾವಿಸಿದ ಪರಂಪರೆ. ಒಳ್ಳೆಯದನ್ನು ಸೃಷ್ಟಿಸಿ ಉಳಿಸಿ ಬೆಳಸಿಕೊಡಬೇಕು. ಕೆಟ್ಟದನ್ನು ನಾಶ ಮಾಡಬೇಕು. ನಂತರ ಒಳ್ಳೆಯದನ್ನು ಸೃಜಿಸಬೇಕು. ಅದನ್ನು ಬೆಳೆಸಬೇಕು’ ಎಂದು ಕರೆ ನೀಡಿದ್ದಾರೆ. ಹಿರಿಯ ಲೆಕ್ಕ ಪರಿಶೋಧಕ, ನ್ಯಾಯಾಧೀಶ ಪ್ರಕಾಶ ಹೆಗಡೆ ಹುಳಗೋಳ ಅವರು ಮಾತನಾಡಿ `ದೇವಸ್ಥಾನಗಳ ಸ್ಥಳ ಮಹಾತ್ಮೆಗಳೇ ಭಕ್ತರನ್ನು ಸೆಳೆಯುತ್ತವೆ’ ಎಂದರು. ವಿ ಟಿ ಹೆಗಡೆ ಜಾನ್ಮನೆ, ಇಂಜನೀಯರ್ ಅರುಣ ನಾಯಕ, ಆಡಳಿತ ಮಂಡಳಿಯ ಮಹಾಬಲೇಶ್ವರ ಹೆಗಡೆ ಕೂರ್ಸೆ, ಅನಂತ ಪೈ, ಭರಸಗುಣಿ ಶ್ರೀರಾಮ ಹೆಗಡೆ, ಅನಿತಾ ಪಂಡಿತ್ ಅವರು ಇದ್ದರು. ಅನಂತ ಶಾಸ್ತ್ರಿ ವೇದಘೋಷ ನಡೆಯಿತು. ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ಅನಿತಾ ಹೆಗಡೆ ಕೂಗ್ತೆಮನೆ ನಿರ್ವಹಿಸಿದರು.