ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅಲ್ಲಿದ್ದ ಆಕಳ ಕರುವಿನ ಮೇಲೆ ನಾಯಿಗಳ ಆಕ್ರಮಣ ನಡೆದಿದೆ. ಆ ದಾಳಿ ಸಹಿಸಲಾಗದೇ ಪುಠಾಣಿ ಕರು ಕೊನೆಯುಸಿರೆಳೆದಿದೆ.
ನಿತ್ಯ ಸಾವಿರಾರು ಪ್ರವಾಸಿಗರು ಬರುವ ಗೋಕರ್ಣದಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳು ಕಾಣಿಸುತ್ತಿವೆ. ಪ್ರವಾಸಿಗರು ಹೆಚ್ಚಿಗೆ ಭೇಟಿ ನೀಡುವ ಕಡಲತೀರದಲ್ಲಿಯೂ ಬೀದಿ ನಾಯಿಗಳ ಕಾಟ ಜೋರಾಗಿದೆ. ಬೀದಿ ನಾಯಿ ನಿಯಂತ್ರಣಕ್ಕಾಗಿ ಅಲ್ಲಿನ ಜನ ಅನೇಕ ಬಾರಿ ಗ್ರಾಮ ಪಂಚಾಯತಗೆ ಮನವಿ ಮಾಡಿದ್ದಾರೆ. ಆದರೆ, ಅದರಿಂದ ಯಾವ ಕ್ರಮವೂ ಆಗಿಲ್ಲ.
ಕುಡ್ಲೆ ಕಡಲತೀರದ ಸುತ್ತ ಗುಂಪು ಗುಂಪಾಗಿ ಬೀದಿ ನಾಯಿಗಳು ಸಂಚರಿಸುತ್ತಿವೆ. ಇಲ್ಲಿ ಅನೇಕ ಪ್ರವಾಸಿಗರಿಗೆ ನಾಯಿ ಕಚ್ಚಿದ ಉದಾಹರಣೆಗಳಿವೆ. ವಿವಿಧ ಹೊಟೇಲಿನವರು ಎಲ್ಲೆಂದರಲ್ಲಿ ಮಾಂಸ ಬಿಸಾಡುತ್ತಿದ್ದು, ಅದನ್ನೇ ಆಸರೆಯನ್ನಾಗಿಸಿಕೊಂಡು ನಾಯಿಗಳು ಬದುಕುತ್ತಿವೆ. ಮಾಂಸದ ರುಚಿ ನೋಡಿದ ನಾಯಿಗಳು ಕಡಲತೀರಕ್ಕೆ ಬಂದಿದ್ದ ಗೋವಿನ ಮೇಲೆ ದಾಳಿ ನಡೆಸಿದ್ದು, ಪರಿಣಾಮ ಆ ಗೋವು ಅಲ್ಲಿಯೇ ಸಾವನಪ್ಪಿದೆ.