ಕಾರವಾರ–ಯಶವಂತಪುರ ರೈಲಿನಲ್ಲಿ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ರೈಲಿನಲ್ಲಿದ್ದ ಸಹ ಪ್ರಯಾಣಿಕರೇ ಹೆರಿಗೆ ಮಾಡಿಸಿದ್ದಾರೆ.
ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಗರ್ಭಿಣಿಯೊಬ್ಬರು ಪ್ರಯಾಣ ಬೆಳೆಸಿದ್ದರು. ನಿರಿಕ್ಷಿತ ದಿನಕ್ಕೂ ಮೊದಲೇ ಅವರಿಗೆ ಹೆರಿಗೆ ನೋವು ಕಾಣಿಸಿತು. ಆದರೆ, ಚಲಿಸುವ ರೈಲಿನಲ್ಲಿ ಅವರಿಗೆ ವೈದ್ಯಕೀಯ ನೆರವು ಸಿಗಲಿಲ್ಲ. ಮುಂದಿನ ನಿಲ್ದಾಣ ಬರುವವರೆಗೂ ಕಾಯುವ ಪರಿಸ್ಥಿತಿ ಸಹ ಇರಲಿಲ್ಲ. ಪರಿಸ್ಥಿತಿ ಅರಿತ ಇನ್ನಿತರ ಮಹಿಳೆಯರು ಹೆರಿಗೆ ಮಾಡಿಸಲು ಸಜ್ಜಾದರು.
ಮೊದಲು ಆ ಬೋಗಿಗೆ ಬೆಡ್‌ಶೀಟ್ ಪರದೆ ಕಟ್ಟಿ ಅದನ್ನು ತಾತ್ಕಾಲಿಕ ಪ್ರಸೂತಿ ಗೃಹವಾಗಿ ಮಾರ್ಪಡಿಸಿದರು. ರೈಲು ಬಂಟ್ವಾಳ ತಲುಪುವ ಹೊತ್ತಿಗೆ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿನ ಮೊದಲ ಅಳು ಕೇಳಿದಾಗ ರೈಲಿನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಸದ್ಯ ತಾಯಿ ಮತ್ತು ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ.