ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಪಕ್ಷವು ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಾರ್ಯಚಟುವಟಿಕೆ ಶುರು ಮಾಡಿದ್ದು, ಇಲ್ಲಿನ 195 ಸಮಸ್ಯೆಗಳ ಬಗ್ಗೆ ಜನರೇ ಪ್ರಜಾಕೀಯ ಪಕ್ಷದ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆ.
ರಾಜಕಾರಣದಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಚಿತ್ರನಟ ಉಪೇಂದ್ರ ಅವರು `ಪ್ರಜಾಕೀಯ’ ಎಂಬ ಪಕ್ಷ ಕಟ್ಟಿದ್ದಾರೆ. ಅದಕ್ಕೆ ಅನುಗುಣವಾಗಿ ಅವರು ಪ್ರಜಾಕೀಯ ಹೆಸರಿನಲ್ಲಿ ಅವರು ವೆಬ್‌ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ಸ್ಥಾಪಿಸಿದ್ದಾರೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರದ ಮಾಹಿತಿ ಹಾಕಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯತ ಕ್ಷೇತ್ರವನ್ನು ಸೇರಿ ಪುರಸಭೆ, ಪಟ್ಟಣ ಪಂಚಾಯತ ಹಾಗೂ ನಗರಸಭೆಯ ವಿವರ ದಾಖಲಿಸಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಪೂರ್ತಿ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ ಅಲ್ಲಿ ಸಮಸ್ಯೆಗಳ ಮುಂದಿರುವ ಬಟನ್ ಒತ್ತುವ ಮೂಲಕ ಆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಧ್ವನಿಯೆತ್ತುವ ರೀತಿ ಅಪ್ಲಿಕೇಶನ್ ಸಿದ್ಧವಾಗಿದೆ.
`ಮೂರ್ಖರ ದಿನ’ ಎಂದು ಬಿಂಬಿಸಲಾದ ಏಪ್ರಿಲ್ 1ನ್ನು `ಬುದ್ದಿವಂತರ ದಿನ’ ಎಂದು ಉಪೇಂದ್ರ ಅವರು ಕರೆದಿದ್ದು, ಅದೇ ದಿನ `ಪ್ರಜಾಕೀಯ ಮೊಬೈಲ್ ಅಪ್ಲಿಕೇಶನ್’ ಬಿಡುಗಡೆ ಮಾಡಿದ್ದಾರೆ. ಈ ಐದು ದಿನದ ಅವಧಿಯಲ್ಲಿ ಆ ಆಫ್ ಮೂಲಕ ಜನ ತಮ್ಮೂರಿನ ಸಮಸ್ಯೆಗಳ ಬಗ್ಗೆ ವಿವರಿಸಿದ್ದು, ಉತ್ತರ ಕನ್ನಡ ಜಿಲ್ಲೆಯಿಂದಲೂ 195 ಸಮಸ್ಯೆಗಳ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಯಾವ ಸಮಸ್ಯೆಯ ಬಗ್ಗೆ ಜನ ಹೆಚ್ಚಿನ ಪ್ರಮಾಣದಲ್ಲಿ ಧ್ವನಿ ಎತ್ತಿದ್ದಾರೆ? ಎನ್ನುವುದರ ಬಗ್ಗೆ ಅಲ್ಲಿ ಪ್ರದರ್ಶನವಾಗುತ್ತಿದೆ. ವಿವಿಧ ವಿಧಾನಸಭಾ ಕ್ಷೇತ್ರದ ಜನ ಅನುಭವಿಸುತ್ತಿರುವ ತೊಂದರೆ-ತಾಪತ್ರೆಯಗಳ ಬಗ್ಗೆ ಆ ಅಪ್ಲಿಕೇಶನ್ ಮೂಲಕ ಉಪೇಂದ್ರ ಅವರ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮುಖ್ಯವಾಗಿ ರಸ್ತೆ, ಕುಡಿಯುವ ನೀರು, ಒಳ ಚರಂಡಿ, ಉದ್ಯೋಗ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಜನ ಹೇಳಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ಪ್ರಜಾಕೀಯ ಪಕ್ಷದ ವೆಬ್‌ಸೈಟಿನಲ್ಲಿ ಅಳವಡಿಸಲಾಗಿದ್ದು, ಅಲ್ಲಿಯೇ ಜನ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ವಿಷಯವಾಗಿ ಉದ್ಯೋಗ ಸಮಸ್ಯೆಯ ಕುರಿತು 17, ಆರೋಗ್ಯ ಸಮಸ್ಯೆ ಕುರಿತು 18, ಶಿಕ್ಷಣ ಸಮಸ್ಯೆಯ ಕುರಿತು 14 ಹಾಗೂ ರಸ್ತೆ ಸಮಸ್ಯೆ ಕುರಿತು 21 ಜನ ಉಪೇಂದ್ರ ಅವರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇದರೊಂದಿಗೆ 11 ಜನ ನೀರಿನ ಸಮಸ್ಯೆ, 12 ಜನ ಒಳ ಚರಂಡಿ ಸಮಸ್ಯೆ, 13 ಜನ ಕಸದ ಸಮಸ್ಯೆ ಹಾಗೂ 11 ಜನ ಬೀದಿ ದೀಪ ಸಮಸ್ಯೆಯ ಬಗ್ಗೆ ಹೇಳಿದ್ದಾರೆ. ಭದ್ರತಾ ಸಮಸ್ಯೆ ಬಗ್ಗೆ 11, ಉದ್ಯಾನವನ ಸಮಸ್ಯೆ 6, ನಿರ್ಮಾಣ ಸಮಸ್ಯೆ ಕುರಿತು 6, ವಿದ್ಯುತ್ ಸಮಸ್ಯೆ ಬಗ್ಗೆ 7, ಅರಣ್ಯ ಹಾಗೂ ಪರಿಸರ ಸಮಸ್ಯೆ ಬಗ್ಗೆ 8, ಸರ್ಕಾರಿ ಸೇವೆಯಲ್ಲಿನ ತೊಂದರೆಗಳ ಕುರಿತು 15 ಹಾಗೂ ಮೂಲಭೂತ ಸೌಕರ್ಯ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ 25 ವರದಿಗಳು ಪ್ರಜಾಕೀಯ ಪಕ್ಷದ ಕಡತ ಸೇರಿದೆ.
ಆಕ್ಷಾಂಕ್ಷಿ ಸ್ಥಾನಕ್ಕೆ ಒಬ್ಬರೂ ಇಲ್ಲ!
ಉಪೇಂದ್ರ ಅವರ ಪ್ರಜಾಕೀಯ ಪಕ್ಷದಿಂದ ವಿವಿಧ ಚುನಾವಣೆ ವೇಳೆ ಟಿಕೆಟ್‌ಪಡೆಯಲು ಸಹ ಇದೇ ಅಪ್ಲಿಕೇಶನ್ ಮೂಲಕ ಅರ್ಜಿ ಹಾಕುವ ಅವಕಾಶ ಕೊಡಲಾಗಿದೆ. ಲೋಕಸಭೆ, ವಿಧಾನಸಭೆ ಜೊತೆ ಸ್ಥಳೀಯ ಸಂಸ್ಥೆಗಳ ಹೆಸರು ಆರಿಸಿ ಅಲ್ಲಿ ಅಭ್ಯರ್ಥಿಗಳು ಸ್ವ ವಿವರ ದಾಖಲಿಸುವುದರ ಮೂಲಕ ಅರ್ಜಿ ಹಾಕುವಂತೆ ಮಾಡಲಾಗಿದೆ. ಆಯಾ ಕ್ಷೇತ್ರದಿಂದ ಅಭ್ಯರ್ಥಿ ಸ್ಥಾನ ಬಯಸಿ ಪ್ರತಿಯೊಬ್ಬರು ಅರ್ಜಿ ಹಾಕುವ ಅವಕಾಶ ನೀಡಿದ್ದು, ಅರ್ಜಿ ಹಾಕಿದವರನ್ನು ಮೂಲಕ ಪ್ರಜಾಕೀಯ ಪಕ್ಷದ ಪ್ರಮುಖರು ಸಂದರ್ಶನ ಮಾಡುತ್ತಾರೆ. ಮೂರು ಹಂತದಲ್ಲಿ ಈ ಸಂದರ್ಶನ ನಡೆಯಲಿದ್ದು, ಅರ್ಜಿ ಹಾಕುವ ವೇಳೆಯಲ್ಲಿಯೇ ಸಂದರ್ಶನದ ಸಮಯ ನಿಗದಿ ಮಾಡಲಾಗುತ್ತದೆ. ಮೊದಲು ಆನ್‌ಲೈನ್ ಮೂಲಕ ಸಂದರ್ಶನ ನಡೆಸಲಿದ್ದು, ನಂತರ ನೇರ ಭೇಟಿಯ ಸಂದರ್ಶನವನ್ನು ಮಾಡುವ ರೀತಿ ಮೊಬೈಲ್ ಅಪ್ಲಿಕೇಶನ್ ಆಯ್ಕೆಗಳಿವೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಟಿಕೆಟ್ ಬಯಸಿ ಈವರೆಗೆ ಒಂದೂ ಅರ್ಜಿ ಸಲ್ಲಿಕೆ ಆಗಿಲ್ಲ.