ಶಿರಸಿಯ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಶ್ರೀ ವೇಂಕಟರಮಣನ ಭವ್ಯ ಮಹಾರಥೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಭಕ್ತರ ಹರ್ಷೋದ್ಗಾರ, ಶ್ರೀ ಗೋವಿಂದ ನಾಮ ಸಂಕೀರ್ತನೆ, ಭಕ್ತರ ಭಾವುಕ ಕ್ಷಣಗಳಿಗೆ ಈ ಸನ್ನಿಧಾನ ಸಾಕ್ಷಿಯಾಗಿದೆ.
ಪರಾಭವ ನಾಮ ಸಂವತ್ಸರದ ದೇವರ ವಾರ್ಷಿಕ ರಥೋತ್ಸವದ ವಿವಿಧ ಧಾರ್ಮಿಕ ಕೈಂಕರ್ಯಗಳು, ವಿಧಿವಿಧಾನಗಳು ಯುಗಾದಿಯಿಂದ ಆರಂಭಗೊAಡಿತ್ತು. ಉತ್ಸವದ ಪ್ರಮುಖ ಆಕರ್ಷಣೆಯಾದ ಮಹಾರಥೋತ್ಸವವು ಚೈತ್ರ ಶುದ್ಧ ಹುಣ್ಣಿಮೆಯ ದಿನವಾದ ಗುರುವಾರ ಸಾಂಗವಾಗಿ ನೆರವೇರಿತು. ಬೆಳಗ್ಗೆ 7 ಗಂಟೆಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ಭಟ್ ನೇತೃತ್ವದಲ್ಲಿ ಶ್ರೀ ದೇವರ ಪೂಜಾದಿ ವಿಧಿವಿಧಾನಗಳು ಶುರುವಾದವು. 7.30ಕ್ಕೆ ವಾದ್ಯ, ನಗಾರಿಗಳು ಹಾಗೂ ವೇದಘೋಷಗಳೊಂದಿಗೆ ಛತ್ರ ಚಾಮರದೊಂದಿಗೆ ಶ್ರೀದೇವಿ ಭೂದೇವಿಯರನ್ನೊಳಗೊಂಡ ಶ್ರೀ ವೆಂಕಟರಮಣ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಥದಲ್ಲಿ ಸ್ಥಾಪಿತನಾದ ವೆಂಕಟರಮಣನಿಗೆ ವೈದಿಕರ ಮಂತ್ರಘೋಷದೊAದಿಗೆ ಪೂಜೆ, ಪ್ರಾರ್ಥನೆಗಳು ಸಲ್ಲಿಕೆಯಾದವು. ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ಸಿಕ್ಕಿತು. ಮೂಲ ನೆಲೆಯಿಂದ ರಥವು 8ಗಂಟೆಗೆ ಹೊರಟು ಶ್ರೀ ಕ್ಷೇತ್ರದ ವಿಶಾಲ ರಥಬೀದಿಯಲ್ಲಿ ಸಾಗಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಅಪಾರ ಭಕ್ತರು ಜಯಘೋಷಗಳನ್ನು ಮೊಳಗಿಸಿದರು. ಶ್ರೀ ದೇವರನ್ನು ಪ್ರಾರ್ಥಿಸಿ ಹಸಿಕಡಲೆ ಹಾಗೂ ಬಾಳೆಹಣ್ಣನ್ನು ರಥಕ್ಕೆ ಎಸೆದು ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಸಂಪ್ರದಾಯದAತೆ ರಥದ ಚಕ್ರಕ್ಕೆ ಕಾಯಿ ಒಡೆಯಲಾಯಿತು. `ಗೋವಿಂದಾ ಗೋವಿಂದಾ’ ಎಂಬ ಸಂಕೀರ್ತನೆಯೊAದಿಗೆ ಭಕ್ತರು ರಥದ ಹಗ್ಗವನ್ನು ಹಿಡಿದು ರಥವನ್ನ ಎಳೆದರು.
ಸುಮಾರು 8.45 ಕ್ಕೆ ರಥಬೀದಿಯ ಕೊನೆಯಲ್ಲಿ ಶ್ರೀ ದಾಸ ಮಾರುತಿ ದೇವಸ್ಥಾನದವರೆಗೆ ರಥ ಸಾಗಿತು. ಅಲ್ಲಿ ಪೂಜೆಗಳ ನಂತರ ಮತ್ತೆ ತಿರುಗಿ ಹೋರಟ ಮಹಾರಥವು ಸುಮಾರು 9.30ಕ್ಕೆ ದೇವಸ್ಥಾನದ ಮೂಲ ನೆಲೆಗೆ ತಲುಪಿತು. ಬಳಿಕ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ ಮಹಾರಥೋತ್ಸವದ ಸಂದೇಶವನ್ನ ತಿಳಿಸಿ ಶ್ರೀ ದೇವರ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡ ಕಾರ್ಯಕರ್ತರಿಗೆ, ಆರಕ್ಷಕರಿಗೆ ಧನ್ಯವಾದ ಸಲ್ಲಿಸಿದರು. ನಂತರ 10 ಗಂಟೆಯ ನಂತರ ರಥದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸರತಿ ಸಾಲಿನಲ್ಲಿ ನಿಂತು ರಥಾರೂಢನಾದ ಶ್ರೀ ವೆಂಕಟರಮಣ ದೇವರ ದರ್ಶನ ಪಡೆದ ಭಕ್ತರು, ಹರಕೆ ಅರ್ಪಿಸಿ ಪುನೀತರಾದರು. ಈ ವೇಳೆ ಅನೇಕರು ಹಣ್ಣು ಕಾಯಿ ಸೇವೆಯನ್ನು ಸಮರ್ಪಿಸಿ ಕೃತಾರ್ಥರಾದರು.
ರಥದರ್ಶನದ ಬಳಿಕ ದೇವಾಲಯಕ್ಕೆ ತೆರಳಿ ಶ್ರೀ ದೇವರ ದರ್ಶನ ಪಡೆದು, ಪದ್ಮಾವತಿ ದೇವಿಗೆ ಉಡಿ ಸೇವೆ ಸಮರ್ಪಿಸಿದರು. ಪ್ರಸಾದ ರೂಪದಲ್ಲಿ ಅತ್ರಾಸ ಹಾಗೂ ಲಾಡುವನ್ನು ಸ್ವೀಕರಿಸಿದರು. ಶ್ರೀ ದೇವರ ಉತ್ಸವವನ್ನು ಕಾರ್ಯಕರ್ತರ ಸಹಕಾರದೊಂದಿಗೆ ದೇವಾಲಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸಿದರು.