ಸಿದ್ದಾಪುರ ವಕೀಲ ಸುದರ್ಶನ ನಾಯ್ಕ ಅವರಿಗೆ ಜೀವ ಬೆದರಿಕೆ ಬಂದಿದೆ. ಪ್ರಕರಣವೊಂದರ ಕುರಿತು ವಾದ ಮಂಡಿಸದoತೆ ಅವರಿಗೆ ಶಿಕ್ಷಕರೊಬ್ಬರು ಬೆದರಿಕೆ ಹಾಕಿದ್ದಾರೆ.
ಸಿದ್ದಾಪುರ ಹುಲಿಮನೆ ಬಳಿಯ ಬೇಡ್ಕಣಿಯ ಸುದರ್ಶನ ಸೀತಾರಾಮ ನಾಯ್ಕ ಅವರು ಸದ್ಯ ಹೊಸಪೇಟೆ ಬಳಿ ವಾಸವಾಗಿದ್ದಾರೆ. 33 ವರ್ಷದ ಅವರು ಕಳೆದ ಎಂಟು ವರ್ಷದಿಂದ ವಕೀಲ ವೃತ್ತಿಯಲ್ಲಿದ್ದಾರೆ. ಹೀಗಿರುವಾಗ, ಬೇಡ್ಕಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ ಪಿ ರವಿ ಅವರು ವಿದ್ಯಾರ್ಥಿಯೊಬ್ಬರ ಮೇಲೆ ಹಲ್ಲೆ ನಡೆಸಿದ ವಿಷಯ ವಕೀಲ ಸುದರ್ಶನ ನಾಯ್ಕ ಅವರಿಗೆ ಗೊತ್ತಾಗಿದೆ. ಈ ಬಗ್ಗೆ ಎನ್ ಎಸ್ ಯು ಐ ಸಂಘಟನೆಯ ಜಿಲ್ಲಾಧ್ಯಕ್ಷ ವಿಷ್ಣು ಗೌಡ ಅವರು ವಕೀಲ ಸುದರ್ಶನ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ.
2025ರ ಜನವರಿ 11ರ ರಾತ್ರಿ ವಿಷ್ಣು ಗೌಡ ಅವರು ಈ ಬಗ್ಗೆ ಸುದರ್ಶನ ನಾಯ್ಕ ಅವರಿಗೆ ಮಾಹಿತಿ ನೀಡಿದ್ದು, ಆ ಬಗ್ಗೆ ಕಾನೂನು ಹೋರಾಟ ನಡೆಸುವ ಬಗ್ಗೆ ಸಲಹೆ ಕೇಳಿದ್ದಾರೆ. ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನ ವಿರುದ್ಧ ಕಠಿಣ ಕ್ರಮವಾಗುವ ನಿಟ್ಟಿನಲ್ಲಿ ಹೋರಾಟ ನಡೆಸುವುದಕ್ಕಾಗಿ ಸುದರ್ಶನ ನಾಯ್ಕ ಅವರು ನಿರ್ಧರಿಸಿದ್ದಾರೆ. ಈ ವಿಷಯ ಅರಿತ ಶಿಕ್ಷಕ ಕೆಪಿ ರವಿ ಅವರು ವಕೀಲ ಸುದರ್ಶನ ನಾಯ್ಕ ಅವರಿಗೆ ಫೋನ್ ಮಾಡದ್ದಾರೆ. `ನೀ ಊರಿಗೆ ಹೋಗುವಾಗ ನಮ್ಮ ಊರು ದಾಟಿಯೇ ಹೋಗಬೇಕು. ಆಗ, ವಿಚಾರಿಸಿಕೊಳ್ಳುವೆ’ ಎಂಬ ಅರ್ಥದಲ್ಲಿ ಕೆಪಿ ರವಿ ಅವರು ಸುದರ್ಶನ ನಾಯ್ಕ ಅವರಿಗೆ ಬೆದರಿಸಿದ್ದಾರೆ.
ಜನವರಿ 13ರ ರಾತ್ರಿ ವಕೀಲ ಸುದರ್ಶನ ನಾಯ್ಕ ಅವರಿಗೆ ಬೇಡ್ಕಣಿಯ ಗಜಾನನ ವೆಂಕಟ್ರಮಣ ನಾಯ್ಕ ಅವರ ಮೊಬೈಲಿನಿಂದ ಫೋನ್ ಬಂದಿದ್ದು, ಆ ವೇಳೆಯಲ್ಲಿಯೇ ಶಿಕ್ಷಕ ಕೆ ಪಿ ರವಿ ಅವರು ಮಾತನಾಡಿದ್ದಾರೆ. `ವಿಶ್ವ ಗೌಡ ಅವರ ಪರ ವಕಾಲತ್ತುವಹಿಸಿದರೆ ಸುಮ್ಮನಿರುವುದಿಲ್ಲ’ ಎಂದು ಹೇಳಿ ಹೆದರಿಸಿದ್ದಾರೆ. ಜೊತೆಗೆ ವಕೀಲ ವೃತ್ತಿಯ ಬಗ್ಗೆ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ. ಅದಾದ ನಂತರ `ಸುದರ್ಶನ ನಾಯ್ಕ ಅವರು 1 ಲಕ್ಷ ರೂ ಹಣಪಡೆದಿದ್ದಾರೆ’ ಎಂದು ಊರಿನ ಎಲ್ಲಡೆ ಸುದ್ದಿ ಹಬ್ಬಿಸಿದ್ದಾರೆ.
ಹಣಪಡೆಯದಿದ್ದರೂ ಹಣಪಡೆದ ಬಗ್ಗೆ ಪುಕಾರು ಹಬ್ಬಿಸಿದಲ್ಲದೇ, ತಮಗೂ ಬೆದರಿಕೆ ಹಾಕಿದ ಶಿಕ್ಷಕ ಕೆ ಪಿ ರವಿ ವಿರುದ್ಧ ಸುದರ್ಶನ ನಾಯ್ಕ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರುವಾಗಿದೆ.