ಕುಮಟಾ ಹಿರೇಗುತ್ತಿಯ ಶ್ರೀ ಬ್ರಹ್ಮ ಜಟಕ ದೇವಸ್ಥಾನದ ಮೇಲೆ ಕಳ್ಳರು ಕಣ್ಣು ಹಾಕಿದ್ದಾರೆ. ಇಲ್ಲಿದ್ದ ಕಾಣಿಕೆ ಹುಂಡಿ ಒಡೆದು ಅಲ್ಲಿದ್ದ ಹಣ ಎಗರಿಸಿದ್ದಾರೆ.
ಏಪ್ರಿಲ್ 1ರ ರಾತ್ರಿ ಈ ಕಳ್ಳತನ ನಡೆದಿದೆ. ಕಾಣಿಕೆ ಹುಂಡಿಗೆ ಭದ್ರವಾದ ಬೀಗ ಹಾಕಿದ್ದರೂ ಕಳ್ಳರು ಅದನ್ನು ಒಡೆದಿದ್ದಾರೆ. ಬೀಗವನ್ನು ಮೀಟಿ ಕಾಣಿಕೆ ಹುಂಡಿ ಬಾಗಿಲು ತೆರೆದು ಅದರಲ್ಲಿದ್ದ ಹಣ ಕದ್ದಿದ್ದಾರೆ. ಏಪ್ರಿಲ್ 2ರ ಬೆಳಗ್ಗೆ ಕಳ್ಳತನ ನಡೆದಿರುವುದು ಊರಿನವರಿಗೆ ಗೊತ್ತಾಗಿದೆ. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ದೇವರ ಹುಂಡಿ ಒಡೆದ ಕಳ್ಳರಿಗೆ ಅಂದಾಜು 10 ಸಾವಿರ ರೂ ಸಿಕ್ಕಿರುವ ಅನುಮಾನಗಳಿವೆ. ಹಿರೇಗುತ್ತಿಯ ಕೃಷಿಕ ಚಂದ್ರಹಾಸ ಹೊಸಬು ನಾಯಕ ಅವರು ಕಳ್ಳತನದ ವರದಿ ಒಪ್ಪಿಸಿದ್ದಾರೆ. ಅದರನ್ವಯ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ಶುರು ಮಾಡಿದ್ದಾರೆ.
ಸಿಕ್ಕಿಬಿದ್ದ ಕಳ್ಳ:
ಹಿರೇಗುತ್ತಿಯ ಬ್ರಹ್ಮಜಟಕ ದೇವಾಲಯದ ಕಳ್ಳತನ ಪ್ರಕರಣ ದಾಖಲಿಸಿದ ಪೊಲೀಸರು ಕಳ್ಳನನ್ನು ಹುಡುಕಿದ್ದಾರೆ. ಹೊನ್ನಾವರ ಕಡತೋಕದ ಗಣೇಶ ಗೋಪಾಲ ದೇಶಭಂಡಾರಿ(೩೬) ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.