ಬನವಾಸಿಯ ಮದನ್ ಆರರ್ ಅವರು ಕಪ್ಪು ಮುಖದ ಮೇಲೆ ಬಿಳಿ ಮಚ್ಚೆಯಿರುವ ಆಕಳನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದು, ಆ ಹಸುವನ್ನು ಕಳ್ಳರು ಅಪಹರಿಸಿದ್ದಾರೆ. ಆಕಳ ಚಹರೆ ಜೊತೆ ಮದನ್ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯ ಸೊರಬಾ ರಸ್ತೆಯಲ್ಲಿ ಮದನ್ ಮಂಜುನಾಥ ಆರರ್ ಅವರು ವಾಸವಾಗಿದ್ದಾರೆ. ಇನ್ನೂ 29 ವರ್ಷದ ಅವರು ಕೃಷಿ ಜೊತೆ ಹೈನುಗಾರಿಕೆಯನ್ನು ಸಹ ಅತ್ಯಂತ ನಿಷ್ಠೆಯಿಂದ ಮಾಡಿಕೊಂಡಿದ್ದಾರೆ. ಮದನ್ ಆರರ್ ಅವರ ಮನೆಯಲ್ಲಿ 5 ಹಸು ಹಾಗೂ ಮೂರು ಕರುಗಳಿವೆ. ಮದನ್ ಅವರ ತಂದೆ ಮಂಜುನಾಥ್ ಆರರ್ ಅವರು ನಿತ್ಯವೂ ಅವುಗಳನ್ನು ಮೇವಿಗೆ ಬಿಟ್ಟು, ಸಂಜೆ ಕೊಟ್ಟಿಗೆಗೆ ತಂದು ಕಟ್ಟುತ್ತಾರೆ.
ಮೇ 20ರಂದು ಮದನ್ ಆರರ್ ಅವರು ತಾವು ಸಾಕಿದ ಎಲ್ಲಾ ಹಸುಗಳನ್ನು ಹಿತ್ತಿಲಲ್ಲಿ ಮೇವಿಗೆ ಬಿಟ್ಟಿದ್ದರು. ಸಂಜೆ ಆಕಳು ಹಾಗೂ ಕರು ಮನೆಗೆ ಬಂದಿದ್ದು, ಒಂದು ಹಸು ಮಾತ್ರ ಮನೆ ಮುಂದಿನ ರಸ್ತೆಯಲ್ಲಿ ಮಲಗಿತ್ತು. ಆ ಹಸುವನ್ನು ಮನೆಗೆ ಹೊಡೆದುಕೊಂಡು ಬಂದರೂ ಅದು ತಪ್ಪಿಸಿಕೊಂಡು ಮತ್ತೆ ರಸ್ತೆ ಕಡೆ ಹೊರಟಿತ್ತು. ಆ ರಾತ್ರಿ ಸಾಕಷ್ಟು ಪ್ರಯತ್ನಿಸಿದರೂ ಹಸು ಬರಲಿಲ್ಲ. ಹೀಗಾಗಿ ಆ ದಿನ ಮದನ್ ಆರರ್ ಅವರು ರಸ್ತೆ ಅಂಚಿನಲ್ಲಿಯೇ ಹಸು ಮಲಗಲು ಬಿಟ್ಟಿದ್ದರು.
ಮರುದಿನ ಬೆಳಗ್ಗೆ 6.30ಕ್ಕೆ ಹೋಗಿ ನೋಡಿದಾಗ ಅಲ್ಲಿ ಹಸು ಕಾಣಲಿಲ್ಲ. ಕೊಟ್ಟಿಗೆಗೆ ಸಹ ಹಸು ಬಂದಿರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. 8 ವರ್ಷ ಪ್ರಾಯದ ಹಸು ಕಾಣದ ಕಾರಣ ಕುಟುಂಬದವರು ಆತಂಕಕ್ಕೆ ಒಳಗಾದರು. ಕೊರಳಿನಲ್ಲಿ ಗಂಟೆಯಿದ್ದ ಹಸುವನ್ನು ಸಹ ಕಳ್ಳರು ಶಬ್ದ ಬಾರದ ರೀತಿ ಅಪಹರಿಸಿದ್ದರು. ಸದ್ಯ ಆ ಹಸುವನ್ನು ಹುಡುಕಿಕೊಡುವಂತೆ ಮದನ್ ಆರರ್ ಅವರು ಬನವಾಸಿ ಪೊಲೀಸರ ಮೊರೆ ಹೋಗಿದ್ದಾರೆ.