ಫೇಸ್ಬುಕ್’ನಲ್ಲಿ ಕಾಣಿಸಿದ ಜಾಹೀರಾತು ನೋಡಿ ದಾಂಡೇಲಿ ನಿವೃತ್ತ ಸೈನಿಕ ದಿವಾಕರ್ ನಾರಾಯಣ ಅವರು 10 ಲಕ್ಷ ರೂ ಕಳೆದುಕೊಂಡಿದ್ದಾರೆ. ದಿವಾಕರ್ ನಾರಾಯಣ ಅವರ ಪತ್ನಿ ಮಾಡಿದ ತಪ್ಪಿಗೆ ಕುಟುಂಬದವರು ಪಶ್ಚಾತಾಪಪಡುತ್ತಿದ್ದಾರೆ.
ದಾಂಡೇಲಿಯ ಸಾಯಿ ನಗರದಲ್ಲಿ ದಿವಾಕರ ನಾರಾಯಣ ಅವರು ವಾಸವಾಗಿದ್ದಾರೆ. 66 ವರ್ಷದ ಅವರು ನಿವೃತ್ತ ಸೈನಿಕರಾಗಿದ್ದು, ಅತ್ಯಂತ ಶಿಸ್ತಿನಿಂದ ಬದುಕಿದವರಾಗಿದ್ದಾರೆ. ಆದರೆ, ಹಣದ ಆಸೆಗೆ ಬಿದ್ದ ಅವರ ಪತ್ನಿ ಫೇಸ್‌ಬುಕ್ ಕಾಣಿಸಿದ ಜಾಹೀರಾತು ನೋಡಿ ಮೋಸ ಹೋಗಿದ್ದಾರೆ. ಸ್ಟೇಟ್ ಬ್ಯಾಂಕ್ ಇಂಡಿಯಾದ ಜಂಟಿ ಖಾತೆಯಲ್ಲಿದ್ದ ಹಣವನ್ನು ಅವರು ಕಳೆದುಕೊಂಡಿದ್ದಾರೆ.
2025ರಲ್ಲಿ ಫೇಸ್ಬುಕ್ ನೋಡುತ್ತಿರುವಾಗ `ಡಾಲರ್ ಲೆಕ್ಕದಲ್ಲಿ ದುಡ್ಡುಗಳಿಸಿ’ ಎಂಬ ಜಾಹೀರಾತು ನೋಡಿದರು. ಆ ಜಾಹೀರಾತು ಮೇಲೆ ಕ್ಲಿಕ್ ಮಾಡಿದರು. ಆಗ ಅಲ್ಲಿ ಹೊಸ ವೆಬ್‌ಸೈಟ್ ತೆರೆದುಕೊಂಡಿದ್ದು, ಅಲ್ಲಿ ತಮ್ಮ ವೈಯಕ್ತಿಕ ವಿವರ ದಾಖಲಿಸಿದರು. ಅದಾದ ನಂತರ ನೋಂದಣಿ ಶುಲ್ಕ ಎಂದು 10 ಸಾವಿರ ಹಾಗೂ 12 ಸಾವಿರ ರೂ ಪಾವತಿ ಮಾಡಿದರು. ಡಿಸೆಂಬರ್ ಅವಧಿಯಲ್ಲಿ `ಡಾಲರ್ ದುಡ್ಡನ್ನು ರೂಪಾಯಿಗೆ ಪರಿವರ್ತಿಸಲು ಹಣ ಕೊಡಬೇಕು’ ಎಂಬ ಫೋನ್ ಬಂದಿದ್ದು, ಅಲ್ಲಿಯೂ ಹಣ ಪಾವತಿಸಿದರು. ಈವರೆಗೆ 1060346ರೂ ಹಣ ಹೂಡಿಕೆ ಮಾಡಿ ಮೋಸ ಹೋದರು.