ಜೊಯಿಡಾದ ರಾಮನಗರದ ಬಳಿ ಬಸ್ಸೊಂದು ಮತ್ತೊಂದು ಬಸ್ಸಿಗೆ ಡಿಕ್ಕಿಯಾಗಿದೆ. ಎರಡು ಬಸ್ಸುಗಳ ಮುಖಾಮುಖಿ ಡಿಕ್ಕಿಯಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದಾರೆ.
ರಾಮನಗರ – ಜೋಯಿಡಾ ರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಚಾಪೋಲಿ ತಿರುವಿನ ಬಳಿ ಸಂಚರಿಸುತ್ತಿದ್ದ ಬಸ್ಸುಗಳು ಪರಸ್ಪರ ಗುದ್ದಿಕೊಂಡಿವೆ. ಎರಡು ಬಸ್ಸುಗಳ ವೇಗ ಜಾಸ್ತಿಯಿದ್ದರೂ ಪ್ರಯಾಣಿಕರಿಗೆ ದೊಡ್ಡ ಪ್ರಮಾಣದ ಗಾಯಗಳಾಗಿಲ್ಲ. ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ನೋವುಗಳಾಗಿದೆ.
ಉಳವಿ – ಇಚಲಕರಂಜಿ ಮಾರ್ಗದ ಬಸ್ಸು ಹಾಗೂ ಬೆಳಗಾವಿ – ಅಂಕೋಲಾ ಮಾರ್ಗವಾಗಿ ಸಂಚರಿಸುವ ಬಸ್ಸುಗಳ ನಡುವೆ ಈ ಅರ್ವಡ ನಡೆದಿದೆ. ಅಪಘಾತದಲ್ಲಿ ಎರಡು ಬಸ್ಸಿನ ಚಾಲಕರಿಗೆ ಅಲ್ಪ ಸ್ವಲ್ಪ ಗಾಯಗಳಾಗಿವೆ. ಬೆಳಗಾವಿ-ಅಂಕೋಲಾ ಬಸ್ಸಿನಲ್ಲಿ ಜೊಯಿಡಾಗೆ ತೆರಳುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತ ಸ್ಥಳದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ಪ್ರಯಾಣಿಕರು ಇನ್ನಷ್ಟು ಸಮಸ್ಯೆ ಅನುಭವಿಸಿದರು.
ಕೊನೆಗೆ ಸಮೀಪದ ಗುಡ್ಡ ಏರಿ ಆಂಬುಲೆನ್ಸಿಗೆ ಪ್ರಯಾಣಿಕರೇ ಫೋನ್ ಮಾಡಿದ್ದು, ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಜೊಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವರು ಚಿಕಿತ್ಸೆಪಡೆದಿದ್ದಾರೆ.