ಭಟ್ಕಳದ ಮುರಿನಕಟ್ಟೆ ಧ್ವಂಸ ವಿವಾದದ ಬಳಿಕ ಅಲ್ಲಿನ ಆಡಳಿತ ಇನ್ನಷ್ಟು ಮುಂಜಾಗ್ರತಾ ಕ್ರಮ ಜರುಗಿಸಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆ ಆಗದ ರೀತಿ ಕಟ್ಟೆಚ್ಚರವಹಿಸಿದೆ. ಬರಲಿರುವ ಹಬ್ಬ-ಹರಿದಿನಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಭಟ್ಕಳದ 60 ರೌಡಿ ಶೀಟರ್’ಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಗುಪ್ತಚರ ಇಲಾಖೆಯ ಮಾಹಿತಿ ಹಾಗೂ ಪೊಲೀಸ್ ವರದಿ ಆಧರಿಸಿ ಭಟ್ಕಳ ತಹಶೀಲ್ದಾರ್ ಪ್ರವೀಣ್ ಕರಾಂಡೆ ಅವರು ನೋಟಿಸ್ ಜಾರಿ ಮಾಡಿದ್ದಾರೆ. 40 ಮಂದಿ ಮುಸ್ಲಿಂ ಹಾಗೂ 20 ಮಂದಿ ಹಿಂದೂ ಯುವಕರಿಗೆ ನೋಟಿಸ್ ಜಾರಿಯಾಗಿದೆ. ಅವರಿಂದ `ಗಣೇಶೋತ್ಸವ, ಈದ್ ಮಿಲಾದ್ ಸೇರಿದಂತೆ ಮುಂಬರುವ ಹಬ್ಬಗಳ ವೇಳೆ ಯಾವುದೇ ರೀತಿಯ ಕೋಮು ಗಲಭೆ, ಅಶಾಂತಿ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ’ ಎಂದು ಬರೆದುಕೊಡುವಂತೆ ಸೂಚಿಸಲಾಗಿದೆ. `ಸಮಾಜದಲ್ಲಿ ದುರ್ವರ್ತನೆ ತೋರುವುದಿಲ್ಲ’ ಎಂದು ತಲಾ 50 ಸಾವಿರ ರೂ ಮೊತ್ತದ ಮುಚ್ಚಳಿಕೆ ಬಾಂಡ್ ಕೊಡುವಂತೆಯೂ ಸೂಚಿಸಲಾಗಿದೆ.
ಈ ನೋಟಿಸ್’ಗೆ ಕೆಲವರು ಆಕ್ಷೇಪಿಸಿದ್ದಾರೆ. ಆ ಬಗ್ಗೆಯೂ ತಹಶೀಲ್ದಾರರು ವಿಚಾರಣೆ ನಡೆಸುವವರಿದ್ದಾರೆ. ಸದ್ಯ `ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಮುಚ್ಚಳಿಕೆ ಬಾಂಡ್ ಏಕೆ ಪಡೆದುಕೊಳ್ಳಬಾರದು?’ ಎಂಬ ಬಗ್ಗೆ ವಿಚಾರಣೆ ನಡೆಸಲು ತಹಶೀಲ್ದಾರ್ ನಿರ್ಧರಿಸಿದ್ದಾರೆ. ನೋಟಿಸ್ ಪಡೆದವರು ಹಾಗೂ ಆಕ್ಷೇಪ ಸಲ್ಲಿಸಿದವರು ನಿಗದಿತ ದಿನ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ.