ಅಂಕೋಲಾ ಬೆಳಂಬಾರದ ಉತ್ತರ ಖಾರ್ವಿವಾಡದಲ್ಲಿ ಒಳಗೆ 200ರೂ.. ಹೊರಗೆ 500ರೂ ಎಂಬ ಸದ್ದು ಕೇಳಿಸಿದೆ. ಈ ಸದ್ದು ಆಲಿಸಿ ಹೋದ ಪೊಲೀಸರಿಗೆ ಐದು ಜನ ಕಾನೂನುಬಾಹಿರ ಕ್ರೀಡೆಯಲ್ಲಿ ತೊಡಗಿರುವುದು ಕಾಣಿಸಿದೆ.
ಬೆಳಂಬಾರ ಉತ್ತರ ಖಾರ್ವಿವಾಡ ಮೀನುಗಾರ ಸುಭಾಷ ವಿಷ್ಣು ಖಾರ್ವಿ, ಬೆಳಂಬಾರ ಮಾರುತಿ ದೇವಸ್ಥಾನ ಆಟೋ ಚಾಲಕ ರವಿ ತಿಮ್ಮಪ್ಪ ಗೌಡ, ಬೆಳಂಬಾರದ ಕಾರ್ಮಿಕ ಯೋಗೇಶ ಕುಸ್ಲು ಗೌಡ, ಮಧ್ಯಖಾರ್ವಿವಾಡದ ಸಂತೋಷ ಗಣಪತಿ ಖಾರ್ವಿ ಹಾಗೂ ಮುದ್ರಾಣಿಯ ಹರ್ಷನ್ ಸುಧಾಕರ ಖಾರ್ವಿ ಸೇರಿ ಅಲ್ಲಿ ಇಸ್ಪಿಟ್ ಎಲೆಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. 12340ರೂ ಹರಡಿಕೊಂಡು ಅವರೆಲ್ಲರೂ ಅಲ್ಲಿ ಆಟವಾಡಿದ್ದಾರೆ.
ಜೂನ್ 3ರ ರಾತ್ರಿ ಬೀದಿ ದೀಪದ ಬೆಳಕಿನಲ್ಲಿ ಈ ಐದು ಜನರ ಜೊತೆ ಇನ್ನಿತರರು ಆಗಮಿಸಿ ಜೂಜಾಟ ನಡೆಸಿದ್ದಾರೆ. ಈ ವೇಳೆ ಪಿಸೈ ಗುರುನಾಥ ಹಾದಿಮನಿ ಅವರು ತಮ್ಮ ತಂಡದ ಜೊತೆ ಅಲ್ಲಿಗೆ ಧಾವಿಸಿದ್ದು, ಅವರೆಲ್ಲರನ್ನು ಹಿಡಿದು ಒಳಗೆ ಹಾಕಿದ್ದಾರೆ. ಹಣ ಹೂಡಿ ಇಸ್ಪಿಟ್ ಆಡಿದ ಕಾರಣ ಆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.