ಅಕೆಶಿಯಾ ಮರ ಕಡಿದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಕಾರಣ ಗೋಕರ್ಣ ಬಳಿಯ ಬಿದ್ರಿಗೇರಿಯ ರಾಯಪ್ಪ ಗೌಡ ಅವರಿಗೆ ಐದು ಜನ ಸೇರಿ ಹೊಡೆದಿದ್ದಾರೆ. ಆ ನೋವು ಸಹಿಸಿಕೊಳ್ಳದ ರಾಯಪ್ಪ ಗೌಡ ಅವರು ಹೊಡೆದವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಕುಮಟಾದ ಗೋಕರ್ಣ ಬಳಿಯ ಬಿದ್ರಿಗೇರಿಯಲ್ಲಿ ರಾಯಪ್ಪ ಬೀರಾ ಗೌಡ ಅವರು ವಾಸವಾಗಿದ್ದಾರೆ. ಕುಮಟಾ ಬಾವಿಕೊಡ್ಲದ ರವಿ ಮಾದೇವ ಗೌಡ, ನವೀನ ಮಾದೇವ ಗೌಡ, ಚಂದ್ರು ಓಮು ಗೌಡ, ಮಂಜು ಓಮು ಗೌಡ, ಮಾದೇವ ಹೊನ್ನು ಗೌಡ ಅವರು ಅಕೆಶಿಯಾ ಕಡಿದು ತುಂಡರಿಸುತ್ತಿರುವ ಬಗ್ಗೆ ರಾಯಪ್ಪ ಗೌಡ ಅವರು ಅರಣ್ಯ ಇಲಾಖೆಯವರಿಗೆ ಹೇಳಿದ್ದಾರೆ. ಅರಣ್ಯ ಸಿಬ್ಬಂದಿ ಬಂದು ಪ್ರಕರಣ ಬಗೆಹರಿಸುವ ಮುನ್ನ ಸುಮ್ಮನಿರುವಂತೆ ಅವರು ಎದುರಾಳಿಗಳಿಗೆ ಸೂಚಿಸಿದ್ದಾರೆ. ಇದನ್ನು ಸಹಿಸದೇ ಆ ಐದು ಜನ ರಾಯಪ್ಪ ಗೌಡ ಅವರಿಗೆ ಹೊಡೆದಿದ್ದಾರೆ.
ಕಡಿದ ಅಕೇಶಿಯಾ ಗಿಡಗಳನ್ನು ತುಂಡು ಮಾಡುವಾಗ ರಾಯಪ್ಪ ಗೌಡ ಅವರು ತಡೆದಿದ್ದು, ಆ ವೇಳೆ ಅಲ್ಲಿಯೇ ಇದ್ದ ಬಡಿಗೆಯಿಂದ ಅವರೆಲ್ಲರೂ ಬಡಿದಿದ್ದಾರೆ. ಕೈಯಿಂದಲೂ ರಾಯಪ್ಪ ಗೌಡ ಅವರಿಗೆ ಥಳಿಸಿದ್ದಾರೆ. ಜೊತೆಗೆ ಕೆಟ್ಟ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ಈ ಎಲ್ಲಾ ವಿಷಯವನ್ನು ರಾಯಪ್ಪ ಗೌಡ ಅವರು ಗೋಕರ್ಣ ಪೊಲೀಸರ ಬಳಿ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ.