ಸರಾಯಿ ಕುಡಿಯುವುದಕ್ಕಾಗಿ ಎಲ್ಲೆಂದರಲ್ಲಿ ಸಾಲ ಮಾಡಿಕೊಂಡಿದ್ದ ಹೊನ್ನಾವರದ ಕೌರಿಕ ಮಹೇಶ ಪಾಚೋಡೆಕರ್ ಅವರು ಸಾಲ ತೀರಿಸಲಾಗದೇ ಸಾವನಪ್ಪಿದ್ದಾರೆ. ತಮ್ಮ ಕಟಿಂಗ್ ಶಾಪ್ ಒಳಗೆ ಅವರು ನೇಣಿಗೆ ಶರಣಾಗಿದ್ದಾರೆ.
ಹೊನ್ನಾವರದ ಪ್ರಭಾತ ನಗರದಲ್ಲಿ ಮಹೇಶ ಸುರೇಶ್ ಪಾಚೋಡೆಕರ್ (42) ಅವರು ವಾಸವಾಗಿದ್ದರು. ಕ್ಷೌರಿಕ ಕೆಲಸ ಮಾಡಿಕೊಂಡು ಅವರು ಕುಟುಂಬ ಸಲಹುತ್ತಿದ್ದರು. ಸರಾಯಿ ಕುಡಿಯುವ ಚಟಕ್ಕೆ ದಾಸರಾಗಿದ್ದ ಮಹೇಶ್ ಅವರು ಕುಡಿತಕ್ಕಾಗಿ ಎಲ್ಲೆಂದರಲ್ಲಿ ಸಾಲ ಮಾಡಿದ್ದರು. ಅವರ ಸಾಲದ ಮಿತಿ ಮೀರಿದರೂ ಕುಡಿತಕ್ಕಾಗಿ ಮತ್ತೆ ಮತ್ತೆ ಕೈಗಡ ಸಾಲಪಡೆಯುತ್ತಿದ್ದರು.
ಈಚೆಗೆ ಸಾಲ ಹಾಗೂ ಸಾಕಷ್ಟು ಸರಾಯಿ ಸಿಗದ ಕಾರಣ ಮಹೇಶ ಅವರು ಬೇಸರಕ್ಕೆ ಒಳಗಾಗಿದ್ದರು. ಜೂನ್ 7ರಂದು ಶನಿದೇವಸ್ಥಾನದ ಬಳಿಯಿರುವ ಪಟ್ಟಣ ಪಂಚಾಯತ ಕಾಂಪ್ಲೇಕ್ಸಿಗೆ ಬಂದ ಅವರು ಅಲ್ಲಿ ಕಟಿಂಗ್ ಶಾಪ್ ತೆರೆದಿದ್ದು, ಅಲ್ಲಿಯೇ ದುಡುಕು ನಿರ್ಧಾರ ಮಾಡಿದರು. ಅಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡು ಅವರು ಉಸಿರು ನಿಲ್ಲಿಸಿದರು. ಸಹೋದರನ ಸಾವಿನ ಬಗ್ಗೆ ನರೇಶ ಪಾಚೋಡಿಕರ್ ಅವರು ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.