ಟಾಕ್ಟರಿಗೆ ಸ್ಕೂಟರ್ ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡು ಕಿಮ್ಸ್’ಗೆ ದಾಖಲಾಗಿದ್ದ ಶಿರಸಿಯ ವೆಂಕಟೇಶ್ ಬೋವಿವಡ್ಡರ್ ಅವರು ಸಾವನಪ್ಪಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಬದುಕಿಸುವ ಪ್ರಯತ್ನ ನಡೆದರೂ ಪ್ರಯೋಜನವಾಗಿಲ್ಲ.
ಶಿರಸಿಯ ಸುಭಾಶ ನಗರದದಲ್ಲಿ ವೆಂಕಟೇಶ್ ನಾರಾಯಣ ಬೋವಿವಡ್ಡರ್ (43) ಅವರು ವಾಸವಾಗಿದ್ದರು. ಜೂನ್ 17ರ ಮಧ್ಯಾಹ್ನ ಅವರು ಮರಾಠಿಕೊಪ್ಪದ ಪರಮೇಶ್ವರ ಕನ್ನಾ ನಾಯ್ಕ ಅವರ ಜೊತೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು. ಕೇಂದ್ರ ಬಸ್ ನಿಲ್ದಾಣದಿಂದ ಒನ್ ವೇ ರಸ್ತೆಯಲ್ಲಿ ಸ್ಕೂಟಿ ಓಡಿಸಿಕೊಂಡು ಬಂದ ಪರಮೇಶ್ವರ ನಾಯ್ಕ ಅವರು ಬಿಡ್ಕಿ ಸರ್ಕಲ್ ಬಳಿ ಟಾಕ್ಟರ್ ಇಂಜಿನ್ ಹಾಗೂ ಟಯರಿನ ನಡುವೆ ಸ್ಕೂಟಿ ಗುದ್ದಿದ್ದರು.
ಆರೆಕೊಪ್ಪದ ನಾಗರಾಮ ಮಾರುತಿ ನಾಯ್ಕ ಅವರು ಓಡಿಸುತ್ತಿದ್ದ ಟಾಕ್ಟರಿಗೆ ಸ್ಕೂಟಿ ಗುದ್ದಿದ ಪರಿಣಾಮ ಸ್ಕೂಟಿ ಸವಾರರಿಬ್ಬರೂ ಗಾಯಗೊಂಡಿದ್ದರು. ಅದರಲ್ಲಿ ಗಂಭೀರ ಗಾಯಗೊಂಡ ಸಹಸವಾರ ವೆಂಕಟೇಶ್ ಬೋವಿವಡ್ಡರ್ ಅವರನ್ನು ಅದೇ ದಿನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಿರಂತರ ಚಿಕಿತ್ಸೆ ನೀಡಿದರೂ ಅವರು ಅದಕ್ಕೆ ಸ್ಪಂದಿಸಲಿಲ್ಲ. ಚಿಕಿತ್ಸೆ ಫಲ ನೀಡದ ಕಾರಣ ವೆಂಕಟೇಶ್ ಬೋವಿವಡ್ಡರ್ ಅವರು ಜೂನ್ 18ರಂದು ಸಂಜೆ ಸಾವನಪ್ಪಿದರು.