ಯಲ್ಲಾಪುರದ ಕಿರವತ್ತಿಯಲ್ಲಿ ರಾಜಾರೋಷವಾಗಿ ಸರಾಯಿ ಮಾರಾಟ ನಡೆಯುತ್ತದೆ. ಸಣ್ಣಪುಟ್ಟ ಗೂಡಂಗಡಿಯವರು ಸಹ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಅರಿವಿದ್ದರೂ ಅಬಕಾರಿ ಅಧಿಕಾರಿಗಳು ಎಲ್ಲವನ್ನು ಸಹಿಸಿಕೊಂಡು ಮೌನವಾಗಿದ್ದಾರೆ.
ಕಿರವತ್ತಿ ಸುತ್ತಲಿನ ವಿವಿಧ ಶಾಲೆ, ಪೊಲೀಸ್ ಹೊರಠಾಣೆ, ಸರ್ಕಾರಿ ಕಚೇರಿ ಸುತ್ತಲಿನ ಗೂಡಂಗಡಿಗಳಲ್ಲಿ ಸರಾಯಿ ಸಿಗುತ್ತಿದೆ. ಇಲ್ಲಿನ ಕೆಲ ಚಹಾ ಅಂಗಡಿ, ಪಾಸ್ಟ್ಫುಡ್ ಮಳಿಗೆಗಳು ಸರಾಯಿ ಮಾರಾಟದಿಂದ ಹೊರತಾಗಿಲ್ಲ. ಹೊಟೇಲುಗಳಲ್ಲಿ ಸಹ ಸರಾಯಿ ಸಿಗುತ್ತಿದ್ದು, ಅನೇಕರು ತಮ್ಮ ದುಡಿಮೆಯ ಹಣವನ್ನು ಅಲ್ಲಿ ಚೆಲ್ಲುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿoದ ರಾತ್ರಿ 1ಗಂಟೆಯವರೆಗೂ ಅಂಗಡಿಯ ಬಾಗಿಲು ಅರ್ದ ತೆರೆದಿದ್ದು, ಅಲ್ಲಿ ಜನ ಜಂಗುಳಿ ಕಾಣಿಸುತ್ತಿದೆ. ಮಹಿಳೆಯರು ಸಹ ಈ ಅಕ್ರಮ ಸರಾಯಿ ದಂಧೆಯಲ್ಲಿ ತೊಡಗಿದ್ದಾರೆ.
ಅಂಗಡಿ ಬಾಗಿಲು ಮುಚ್ಚಿದ್ದರೂ ಮನೆ ಬಳಿ ಬರುವ ಗಿರಾಕಿಗೂ ಸರಾಯಿ ಸರಬರಾಜು ಮಾಡುವವರಿದ್ದಾರೆ. ಕೆಲವಡೆ ಬೀಗ ಹಾಕಿದ ಅಂಗಡಿಯ ಬಾಗಿಲು ಬಡಿದರೂ ಮದ್ಯ ಸಿಗುತ್ತದೆ. ಕಿರವತ್ತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿಯೂ ಅಕ್ರಮ ಸರಾಯಿ ದಂಧೆ ಕುರಿತು ಜನ ಧ್ವನಿ ಎತ್ತಿದ್ದಾರೆ. ಸರಾಯಿ ಮಾರಾಟ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಅದರ ಪರಿಣಾಮ ಅಕ್ರಮ ಸರಾಯಿ ಮಾರಾಟಕ್ಕೆ ತಡೆ ಒಡ್ಡುವಂತೆ ಗ್ರಾಮ ಪಂಚಾಯತದಿoದ ಅಬಕಾರಿ ಅಧಿಕಾರಿಗಳಿಗೆ ವರ್ಷದ ಹಿಂದೆಯೇ ಪತ್ರ ರವಾನೆಯಾಗಿದೆ. ಅದಾಗಿಯೂ, ಅಬಕಾರಿ ಅಧಿಕಾರಿಗಳು ಆ ಪತ್ರದ ಕಡೆ ಗಮನಹರಿಸಿಲ್ಲ. ಅಕ್ರಮ ಸರಾಯಿ ಮಾರಾಟದಿಂದ ಆಗುವ ಸಮಸ್ಯೆಗಳ ಬಗ್ಗೆ ಆತಂಕವ್ಯಕ್ತಪಡಿಸಿದರೂ ಕಠಿಣ ಕ್ರಮ ಜರುಗಿಸಿಲ್ಲ.
ಕಿರವತ್ತಿಯಲ್ಲಿ ಒಂದೇ ಒಂದು ಅಧಿಕೃತ ಸರಾಯಿ ಮಾರಾಟ ಮಳಿಗೆಯಿದೆ. ಅದಾಗಿಯೂ, ನೂರಾರು ಅಂಗಡಿಗಳಲ್ಲಿ ಸರಾಯಿ ಸಿಗುತ್ತದೆ. ಅಧಿಕೃತ ಅಂಗಡಿ ಬಾಗಿಲು ಹಾಕಿದ ಸಮಯದಲ್ಲಿ ಅಕ್ರಮ ಮಳಿಗೆಯವರ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ದುಪ್ಪಟ್ಟು ಬೆಲೆ ಕೊಟ್ಟು ಜನ ನಶೆಯೇರಿಸಿಕೊಳ್ಳುತ್ತಿದ್ದಾರೆ. ಶಾಲೆಗಳ ಪಕ್ಕದಲ್ಲಿನ ಅಂಗಡಿಗಳಲ್ಲಿಯೂ ಅಕ್ರಮ ಮದ್ಯದ ವ್ಯಾಪಾರ ಜೋರಾಗಿರುವುದರಿಂದ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ. ಕೆಲ ಬಾರಿ ಪೊಲೀಸರು ದಾಳಿ ಮಾಡಿ ಅಕ್ರಮ ಮದ್ಯ ಮಾರಾಟಗಾರರನ್ನು ಹಿಡಿದಿದ್ದಾರೆ. ಆದರೂ, ಅಕ್ರಮ ಮದ್ಯ ಮಾರಾಟ ಶಾಶ್ವತವಾಗಿ ನಿಂತಿಲ್ಲ.