ಕಂಠಪೂರ್ತಿ ಕುಡಿದಿದ್ದ ಸರ್ಕಾರಿ ಸಿಬ್ಬಂದಿಯೊಬ್ಬರು ಯಲ್ಲಾಪುರದ ಮಂಚಿಕೇರಿಯಲ್ಲಿ ಮೀನು ಮಾರುವ ಮಹಿಳೆಯೊಬ್ಬರ ಬಳಿ ಅನುಚಿತವಾಗಿ ವರ್ತಿಸಿದ್ದು, ಇದನ್ನು ಸಹಿಸದ ಜನ ಆ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸರ್ಕಾರಿ ಸಿಬ್ಬಂದಿಗೆ ಬೀಳುವ ಹೊಡೆತ ತಪ್ಪಿಸಲು ಹೋದ ಸ್ನೇಹಿತನಿಗೂ ಸಾಕಷ್ಟು ಒದೆ ಬಿದ್ದಿದೆ
ಯಲ್ಲಾಪುರದ ಮಂಚಿಕೇರಿಯ ಮಾಗೋಡು ಕ್ರಾಸಿನ ಬಳಿ ಕೆಲವರು ಮೀನು ಹಾಗೂ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ, ಬೇರೆ ಜಿಲ್ಲೆಯಲ್ಲಿ ಪಟ್ಟಣ ಪಂಚಾಯತ ಸಿಬ್ಬಂದಿಯಾಗಿರುವ ಅಜಯ ಗಣೇಶ ಭಂಡಾರ್ಕರ್ ಅವರು ಸೋಮವಾರ ಆ ಮಹಿಳಾ ವ್ಯಾಪಾರಿಗಳ ಬಳಿ ಅನುಚಿತವಾಗಿ ವರ್ತಿಸಿದ್ದಾರೆ. ಪುಕ್ಕಟ್ಟೆ ಮೀನು ಕೊಡುವಂತೆ ದುಂಬಾಲು ಬಿದ್ದ ಅವರು ಅದನ್ನು ಕೊಡದ ಕಾರಣ ಬುಟ್ಟಿಯಲ್ಲಿದ್ದ ಮೀನುಗಳನ್ನು ಚೆಲ್ಲಿದ್ದಾರೆ. ತರಕಾರಿ ಮಾರಾಟ ಮಾಡುವ ಮಹಿಳೆಯನ್ನು ಸಹ ಕೆಟ್ಟದಾಗಿ ನಿಂದಿಸಿದ್ದಾರೆ. ಸರಾಯಿ ಸೇವಿಸಿ ಅಲ್ಲಿಗೆ ಆಗಮಿಸಿದ್ದ ಸರ್ಕಾರಿ ಸಿಬ್ಬಂದಿಯನ್ನು ಸಾರ್ವಜನಿಕರು ತರಾಠೆಗೆ ತೆಗೆದುಕೊಂಡಿದ್ದಾರೆ. ನಂತರ ಮಾತು ತಿರುಗಿಸಿದ ಸರ್ಕಾರಿ ಸಿಬ್ಬಂದಿ `ಇಲ್ಲಿ ಮೀನು ಮಾರುವ ಹಾಗಿಲ್ಲ’ ಎಂದು ಕಾಯ್ದೆ ಮಾತನಾಡಿದ್ದಾರೆ. ಈ ವೇಳೆ ತಮ್ಮ ತಪ್ಪು ಒಪ್ಪಿಕೊಂಡ ಆ ಸಿಬ್ಬಂದಿ ನಷ್ಟ ಭರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ವೇಳೆ ನಡೆದ ಮಾತಿನ ಚಕಾಮಕಿ ವಿಕೋಪಕ್ಕೆ ತಿರುಗಿದ್ದು, ಅಜಯ ಭಂಡಾರ್ಕರ್ ಅವರು ಮೀನು ಮಾರುವ ಮಹಿಳೆ ಮೇಲೆ ಕೈ ಮಾಡಿದ್ದಾರೆ.
ಸರಾಯಿ ಕುಡಿದು ಬಂದಿದಲ್ಲದೇ ಮಹಿಳೆ ಮೇಲೆ ಕೈ ಮಾಡಿದನ್ನು ಸಹಿಸದ ಸಾರ್ವಜನಿಕರು ಆ ಸಿಬ್ಬಂದಿ ಹಾಗೂ ಅವರ ಸ್ನೇಹಿತರನ್ನು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಕೆರಳಿದ ಜನ ಅಜಯ ಭಂಡಾರ್ಕರ್ ಅವರಿಗೆ ಹಿಡಿದು ಹೊಡೆದಿದ್ದಾರೆ. ತಪ್ಪಿಸಲು ಬಂದ ಅವರ ಸ್ನೇಹಿತನಿಗೂ ಎರಡು ಏಟು ಹಾಕಿದ್ದಾರೆ. ಥಳಿತಕ್ಕೆ ಒಳಗಾಗಿದ್ದ ಮೀನು ಮಾರುವ ಮಹಿಳೆ ಸಹ ಅಜಯ ಭಂಡಾರ್ಕರ್ ಅವರ ಮೇಲೆ ಮುಗಿ ಬಿದ್ದಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಅಲ್ಲಿದ್ದ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂತರ ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ವಿಚಾರಣೆ ಮುಂದುವರೆದಿದೆ.